ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ತೋಟಿಗ ಕೃಷಿಕರಿಗೆ ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಾಪ್ತವಾದ ಬೆಟ್ಟ ಭೂಮಿಯನ್ನು ಸರಕಾರ ಕೃಷಿಕರಿಂದ ಕಸಿದುಕೊಳ್ಳುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ. ಬೆಟ್ಟ ಭೂಮಿ ಹಾಗೂ ಅಡಿಕೆ ಮತ್ತು ಸಾಂಬಾರ ಬೆಳೆಗಳ ತೋಟಗಳು ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದ್ದು, ತೋಟಿಗರು ತಮ್ಮ ಭಾಗಾಯ್ತ ಭೂಮಿಯ ಜೊತೆಗೆ ಬೆಟ್ಟಭೂಮಿಗೂ ಸಹ ತೀರ್ವೆ ತುಂಬುತ್ತಿದ್ದಾರೆ. ತೀರ್ವೆ ಆಕರಣೆ ಮಾಡುವ ಭೂಮಿಯ ಪೂರ್ತಿ ಕ್ಷೇತ್ರವನ್ನು ಬ ಖರಾಬ ಎಂದು ಗುರುತಿಸಿ ಪಹಣಿಯಲ್ಲಿ ಕ್ಷೇತ್ರಗಳನ್ನು ಅದರಲ್ಲಿಯೂ ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಶೂನ್ಯಗೊಳಿಸಿರುವುದು ಸರಕಾರ ರೈತರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ. ಈ ಅನ್ಯಾಯ ಹಾಗೂ ಅಸಮ್ಮತ ಕ್ರಮದ ವಿರುದ್ಧ ಹೋರಾಟಕ್ಕೆ ಎಲ್ಲ ತೋಟಿಗರು ಜಾಗೃತರಾಗಿ ಕಾರ್ಯಪೃವೃತ್ತರಾಗುವುದು ತುರ್ತು ಅನಿವಾರ್ಯವೆಂದು ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಹಾಗೂ ಹಿರಿಯ ಸಹಕಾರಿ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು ಯಲ್ಲಾಪುರ ಟಿ.ಎಂ.ಎಸ್. ಸಭಾಭವನದಲ್ಲಿ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಶಿರಸಿ ಇದರ ವತಿಯಿಂದ ಯಲ್ಲಾಪುರ ತಾಲೂಕಿನ ಬೆಟ್ಟ ಬಳಕೆದಾರರಿಗೆ ಬೆಟ್ಟ ಭೂಮಿಯನ್ನು ಬ ಖರಾಬಗೊಳಿಸಿರುವುದರಿಂದ ಉಂಟಾಗುವ ಪರಿಣಾಮಗಳ ಕುರಿತು ಏರ್ಪಡಿಸಿದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನ್ಯಾಯವಾದಿ ಆರ್.ಜಿ. ಹೆಗಡೆ, ಕೇರಿಮನೆ ಮಾತನಾಡಿ, ಬೆಟ್ಟ ಭೂಮಿಗೆ ಅನ್ವಯವಾಗಲಿರುವ ಕಾನೂನುಗಳ ಕುರಿತು ವಿವರವಾದ ಮಾಹಿತಿ ನೀಡಿ, ತೋಟಿಗರಿಗೆ ಬೆಟ್ಟ ಭೂಮಿಯ ಅನಿವಾರ್ಯತೆ ಹಾಗೂ ಅವಶ್ಯಕತೆಯನ್ನು ಅರಿತು 1867ನೇ ಇಸ್ವಿಯಲ್ಲಿಯೇ ಅಂದಿನ ಬ್ರಿಟಿಷ್ ಸರ್ಕಾರದ ಆಳ್ವಿಕೆಯಲ್ಲಿ ಅಧಿಕೃತವಾಗಿ ರೈತರಿಗೆ ಇದನ್ನು ನೀಡಲಾಗಿದೆ. ನಂತರದ ವರ್ಷಗಳಲ್ಲಿ ಸಾಂಬಾರು ಬೆಳೆ ಹಾಗೂ ಅಡಿಕೆ ಬೆಳೆಯ ಭಾಗಾಯ್ತ ಭೂಮಿಯ ಜೊತೆಗೆ ತೀರ್ವೆ ಆಕರಣೆ ಮಾಡಿ ಇದಕ್ಕೆ ಕಾನೂನಿನ ಮಾನ್ಯತೆ ನೀಡಿದೆ. ಇಂದಿಗೂ ಸಹ ಪ್ರಿವಿಲೇಜ್ ರೂಲ್ಸ್ ಅಡಿಯಲ್ಲಿ ನೀಡಿದ ಈ ವಿಶೇಷಾಧಿಕಾರಗಳನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಬರಲಾಗಿದೆ. ಕರ್ನಾಟಕ ಅರಣ್ಯ ಕೈಪಿಡಿ ಅಧ್ಯಾಯ 10 ರ 131 ಎಫ್ ಅಡಿಯಲ್ಲಿ ಬೆಟ್ಟ ಬಳಕೆದಾರರಿಗೆ ನೀಡಿರುವ ಈ ವಿಶೇಷಾಧಿಕಾರಗಳ ಬಗ್ಗೆ ತಿಳಿಸಲಾಗಿದೆ. ಆದರೆ ದುರದೃಷ್ಟವಶಾತ್ ಬೆಟ್ಟ ಬಳಕೆದಾರರನ್ನೂ ಒಳಗೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವವರಿಗೂ ಸಹ ಈ ಬಗ್ಗೆ ತಿಳುವಳಿಕೆಯ ಕೊರತೆ ಕಾಣುತ್ತಿದೆ. ಇವುಗಳ ಬಗ್ಗೆ ಬೆಟ್ಟಬಳಕೆದಾರರು ಜಾಗೃತರಾಗಿ ನಮ್ಮ ಹಕ್ಕು ಪ್ರತಿಪಾದನೆಯ ಜೊತೆಗೆ ಕರ್ತವ್ಯ ನಿರ್ವಹಿಸುವುದಕ್ಕೂ ಸಹ ಆದ್ಯತೆ ನೀಡಬೇಕು ಎಂದರು.
ಹಿರಿಯ ನ್ಯಾಯವಾದಿ ವಿ.ಪಿ ಭಟ್ಟ ಕಣ್ಣಿ ಮಾತನಾಡಿ, ತೋಟಿಗರಿಗೆ ನೀಡಿದ ಅಸೈನ್ಡ್ ಬೆಟ್ಟ ಭೂಮಿಯ ಸಂಪೂರ್ಣ ಕ್ಷೇತ್ರವನ್ನು ಬ ಖರಾಬಗೊಳಿಸಿ ಸಾರ್ವಜನಿಕ ಭೂಮಿಯಾಗಿ ಪರಿವರ್ತಿಸಲು ಹೊರಟಿರುವ ಸರ್ಕಾರದ ಈ ನಿರ್ಧಾರ ತೋಟಿಗರಿಗೆ ನೀಡಿರುವ ಬೆಟ್ಟ ಪ್ರಿವಿಲೇಜ್‌ನ್ನು ಕಸಿದುಕೊಳ್ಳುವ ಆರಂಭಿಕ ಪ್ರಯತ್ನವಾಗಿದೆ. ಕಾರ್ಯಾಂಗ ವ್ಯವಸ್ಥೆ ಮಾಡಿರುವ ಈ ತಪ್ಪು ಕ್ರಮವನ್ನು ಕಾರ್ಯಾಂಗ ವ್ಯವಸ್ಥೆಯಿಂದಲೇ ಸರಿಪಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಬೆಟ್ಟ ಭೂಮಿ ಹೊಂದಿರುವ ಇತರ ಜಿಲ್ಲೆಗಳ ರೈತರ ಸಹಕಾರವನ್ನೂ ಪಡೆದು ಜನಪ್ರತಿನಿಧಿಗಳ ಮೂಲಕ ಸರಕಾರದ ಮೇಲೆ ಒತ್ತಡ ತಂದು 2012ಕ್ಕಿಂತ ಪೂರ್ವದಲ್ಲಿ ಯಾವ ರೀತಿ ಇತ್ತೋ ಅದೇ ರೀತಿ ಪುನಃ ದಾಖಲಿಸಿ ಪಹಣಿಯಲ್ಲಿ ಅಸೈನ್ಡ್ ಬೆಟ್ಟವೆಂದೇ ದಾಖಲಿಸುವ ಕ್ರಮವಾಗಬೇಕು ಎಂದರು.
ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಹಾಗೂ ಟಿ.ಆರ್.ಸಿ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಅಧ್ಯಕ್ಷತೆ ವಹಿಸಿದ್ದರು. ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಮ್.ಕೆ ಭಟ್ಟ ಯಡಳ್ಳಿ ಸ್ವಾಗತಿಸಿದರು. ಬೆಟ್ಟ ಭೂಮಿ ಬ ಖರಾಬ ಜಾಗೃತಿ ಅಭಿಯಾನದ ಸಂಯೋಜಕರಾದ ಎಸ್.ಕೆ. ಭಾಗ್ವತ್ ಶಿರ್ಸಿಮಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಟಿ.ಆರ್.ಸಿ ಸಿಬ್ಬಂದಿ ಜಿ.ಜಿ.ಹೆಗಡೆ ಕುರುವಣಿಗೆ ಬೆಟ್ಟ ಭೂಮಿಯ ವಾಸ್ತವಿಕಾಂಶಗಳ ಕುರಿತಾದ ಸ್ಲೈಡ್ ಶೋ ಪ್ರದರ್ಶಿಸಿದರು. ವಿ.ಟಿ ಹೆಗಡೆ ತೊಂಡೆಕೆರೆ ನಿರೂಪಿಸಿದರು. ಸದಾಶಿವ ಚಿಕ್ಕೊತ್ತಿ ವಂದಿಸಿದರು.