Slide
Slide
Slide
previous arrow
next arrow

ಕಾಗೇರಿ ತಮ್ಮ ಸೋಲಿನ ಅವಲೋಕನ ಮಾಡಿಕೊಳ್ಳಲಿ: ಆರ್.ಎಚ್.ನಾಯ್ಕ

300x250 AD

ಕಾರವಾರ: ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಕಾರಣ ಏನೆಂಬುದನ್ನು ಮೊದಲು ಅವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವ ಮುನ್ನ ಇತಿಹಾಸ ಓದಿಕೊಳ್ಳಲಿ ಎಂದು ಡಿಸಿಸಿ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರೂಪಾಲಿ ನಾಯ್ಕ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ನಮ್ಮ ನಾಯಕರ ವಿರುದ್ಧ ಇತ್ತೀಚಿಗೆ ಪ್ರತಿಭಟಿಸಿ ಹರಿಹಾಯ್ದಿದ್ದರು. ಕಾಂಗ್ರೆಸ್ ಜನಪರವಾಗಿ ಕೆಲಸ ಮಾಡಿಲ್ಲ. ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ಜನಪರ ಗ್ಯಾರೆಂಟಿ ಯೋಜನೆಗಳಿಂದ ಹತಾಶರಾಗಿ, ಭವಿಷ್ಯದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದನ್ನ ಅರಿತು ಇವರೆಲ್ಲ ಮಾತನಾಡುತ್ತಿದ್ದಾರೆ. ಒಳ್ಳೆ ಯೋಜನೆಗಳ ವಿರುದ್ಧ ಆಪಾದನೆ ಮಾಡಿ, ಜನರಿಗೆ ತಪ್ಪು ಸಂದೇಶ ರವಾನಿಸುವುದೇ ಅವರ ಕೆಲಸ ಎಂದರು.

ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕ ಸಂದರ್ಭದಲ್ಲಿ ಜವಾಹರಲಾಲ್ ನೆಹರು ಪಂಚವಾರ್ಷಿಕ ಯೋಜನೆ ಜಾರಿಗೆ ತಂದು ಪ್ರತಿವರ್ಷ ಇಂತಿಷ್ಟು ಅಭಿವೃದ್ಧಿ ಆಗಬೇಕೆಂಬ ದೂರಾಲೋಚನೆಯಿಂದಲೇ ಇಂದು ಭಾರತ ಅಭಿವೃದ್ಧಿ ಹೊಂದುತ್ತಿದೆ. ಇಂದಿರಾ ಗಾಂಧಿಯವರು ಕೂಡ 20 ಅಂಶದ ಕಾರ್ಯಕ್ರಮದ ಮೂಲಕ ದೇಶವನ್ನ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರು. ದೀನ- ದಲಿತ, ಬಡವ, ಅಲ್ಪಸಂಖ್ಯಾತರನ್ನ ಮೇಲಕ್ಕೆತ್ತು ಕಾರ್ಯ ಆ ಯೋಜನೆಗಳಿಂದಾಗಿದೆ. ಊಟಕ್ಕೆ ಕೊರತೆ ಇಲ್ಲದ ಸಂದರ್ಭ ಈಗಿದೆ. ಕೃಷಿ ಅಭಿವೃದ್ಧಿಯ ಮೂಲಕ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ಗಳಿಸಿಕೊಳ್ಳಲು ಕಾರಣ ಕಾಂಗ್ರೆಸ್ ಸರ್ಕಾರ ಎಂದರು.

300x250 AD

ಕಾಗೇರಿಯವರು ಸುಳ್ಳು ಹೇಳುವ ಮೊದಲು ಇತಿಹಾಸ ತೆರೆದು ನೋಡಲಿ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಅಪಾವಾದ ಮಾಡಿದರೆ ನಗೆಪಾಟಲಿಗೀಡಾಗಬಹುದು. ಪ್ರಜಾಸತ್ತಾತ್ಮಕವಾಗಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನ ಉರುಳಿಸಿ ಭ್ರಷ್ಟಾಚಾರ ಮಾಡಿದ್ದು ಯಾರು? ಬಾಂಬೆಯಲ್ಲಿ ಶಾಸಕರನ್ನ ಉಳಿಸಿ ಭ್ರಷ್ಟಾಚಾರ ಸರ್ಕಾರ ನಡೆಸಿದ್ದು ಬಿಜೆಪಿ. ಮಾಡಾಳ್ ವಿರೂಪಾಕ್ಷ ಕಚೇರಿ ಮೇಲೆ ರೈಡ್ ಆಗಿ ಎರಡು ಕೋಟಿ ರೂಪಾಯಿ, ಮಗನ ಮನೆಯಲ್ಲಿ ಆರು ಕೋಟಿ, ಸಾಬೂನು ಮಾರ್ಜಕ ಕಚೇರಿಯಲ್ಲಿ ಎರಡು ಕೋಟಿ ದೊರೆಯಿತು. ಯಾರದ್ದೋ ಮನೆಯಲ್ಲಿ ಸಿಕ್ಕ ಹಣವನ್ನ ಕಾಂಗ್ರೆಸ್ ನವರ ಮನೆಯಲ್ಲಿ ಸಿಕ್ಕಿದ್ದು ಎಂದು ಸುಳ್ಳು ಹರಡುವ ಕೆಲಸ ಬಿಜೆಪಿಗರಿಂದಾಗುತ್ತಿದೆ ಎಂದರು.

ಇವರದ್ದೇ ಸರ್ಕಾರದಲ್ಲಿ ಪಂಚಾಯತರಾಜ್ ಸಚಿವರಾಗಿದ್ದ ಈಶ್ವರಪ್ಪರ ಮನೆಯಲ್ಲಿ ದುಡ್ಡು ಎಣಿಸುವ ಮಶಿನನ್ನ ಲೋಕಾಯುಕ್ತರು ಹಿಡಿದಿದ್ದರು. ಹಿಂದೆಯು ಭ್ರಷ್ಟಾಚಾರ, ಸರಕಾರದಲ್ಲಿದ್ದಾಗಲೂ ಭ್ರಷ್ಟಾಚಾರ, ಮುಂದೆ ಅಧಿಕಾರಕ್ಕೆ ಬರಲೂ ಭ್ರಷ್ಟಾಚಾರ ಮಾಡುತ್ತಿರುವುದು ಬಿಜೆಪಿ. ಆಡಳಿತದ ಕೊನೆಯ ಸಮಯದಲ್ಲಿ ನಿಯಮ ಮೀರಿ ಮಂಜೂರಿಸಿದ ಕಾಮಗಾರಿಗಳ ಬಿಲ್ ಪಾವತಿ ಮಾಡುವ ಹೊಣೆ ನಮ್ಮ ಸರ್ಕಾರದ ಮೇಲಿದೆ. ಮಾಡಿದ ಕಾಮಗಾರಿಗಳು ಕೂಡ ಕಳಪೆ. ಇವರ ಭ್ರಷ್ಟಾಚಾರ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಈಗಾಗಲೇ ರಚನೆಯಾಗಿದೆ ಎಂದರು.

Share This
300x250 AD
300x250 AD
300x250 AD
Back to top