ಶಿರಸಿ: ಸಮಾಜದಲ್ಲಿರುವ ಸಮಸ್ಯೆಗಳಿಗೆ ಕಾವ್ಯಗಳಲ್ಲಿ ಉತ್ತರವಿದೆ ಎಂದು ಕಸಾಪ ಸಿದ್ದಾಪುರ ಘಟಕದ ಅಧ್ಯಕ್ಷ ಗೋಪಾಲ ನಾಯ್ಕ ಹೇಳಿದರು.
ಶನಿವಾರ ನಗರದ ನೆಮ್ಮದಿ ಕುಟೀರದಲ್ಲಿ ಕಸಾಪ ಶಿರಸಿ ತಾಲೂಕಾ ಘಟಕ ಹಾಗೂ ಸಮನ್ವಯ ಚಾರಿಟೆಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿಯನ್ನುದ್ದೋಶಿಸಿ ಮಾತನಾಡಿದ ಅವರು, ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಬರೆದ ಸಾಲುಗಳಿಂದ ಓದುಗರ ಮನ ಮುಟ್ಟುವವನೇ ನಿಜವಾದ ಕವಿ. ಕವನಗಳು ಒಂದೊಂದು ಸಮಯಕ್ಕೆ ಒಂದೊಂದು ಅರ್ಥ ಕಲ್ಪಿಸುತ್ತದೆ. ಕವಿಗಳನ್ನು ಬಹಳಷ್ಟು ಜನರು ಇಷ್ಟ ಪಡುವುದಿಲ್ಲ. ಆದರೂ ಸಹ ಆತ ಕಾವ್ಯಗಳನ್ನು ಬರೆಯುವುದನ್ನು ಬಿಡುವುದಿಲ್ಲ. ಕವನ ಈ ನಾಡಿನಲ್ಲಿರುವ ಹಲವು ಲೋಪ ದೋಷಗಳನ್ನು ಸರಿಪಡಿಸುವ ಸಾಧನವಾಗಿದೆ. ಕವಿ ಸತ್ತರೂ ಸಹ ಆತ ಬರೆದ ಕವನಗಳು ಸಾಯುವುದಿಲ್ಲ ಎಂದರು.
ಕಸಾಪ ಶಿರಸಿ ತಾಲೂಕಾ ಘಟಕದ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ನಮ್ಮ ಶಿರಸಿ ತಾಲೂಕಿನಲ್ಲಿ ಆಗುವಷ್ಟು ಸಾಹಿತ್ಯ ಕಾರ್ಯಕ್ರಮಗಳು ಬೇರೆಲ್ಲೂ ನಡೆಯುವುದಿಲ್ಲ. 2023ನೇ ಸಾಲಿನಲ್ಲಿ ಶಿರಸಿ ತಾಲೂಕಿನ ಲೇಖಕರು ಬರೆದು ಬಿಡುಗಡೆ ಗೊಂಡ ಪುಸ್ತಕಗಳನ್ನು ಅಥವಾ ಪುಸ್ತಕಗಳ ಪಟ್ಟಿಯನ್ನು ಸಾಹಿತ್ಯ ಪರಿಷತ್ ಶಿರಸಿ ಘಟಕಕ್ಕೆ ನೀಡಬೇಕು. ಅದರಲ್ಲಿ 5 ಪುಸ್ತಕಗಳನ್ನು ಆಯ್ಕೆ ಮಾಡಿ ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ ಮನ್ನಣೆ ನೀಡಲು ಚಿಂತನೆ ನಡೆಸಿದ್ದೇವೆ ಎಂದರು.
ಇಪ್ಪತ್ತಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.
ಉಪನ್ಯಾಸಕಿ ಭವ್ಯ ಹಳೆಯೂರ್ ನಿರೂಪಿಸಿದರು. ಶಿವಪ್ರಸಾದ ಹಿರೇಕೈ ವಂದಿಸಿದರು. ಟ್ರಸ್ಟ್ ಅಧ್ಯಕ್ಷೆ ವಿಮಲಾ ಭಾಗ್ವತ್,ಕೆ.ಮಹೇಶ್ ಇದ್ದರು.