ಕಾರವಾರ: ಜಿಲ್ಲಾ ಕೇಂದ್ರದಲ್ಲಿರುವ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಿ, ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ನಗರದ ಮಹಿಳೆಯೊಬ್ಬರು ಕೇದಾರನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬೇಡಿಕೆಯ ಕುರಿತು ದೇವಾಲಯದ ಎದುರು ಮಹಿಳೆ ಬ್ಯಾನರ್ ಪ್ರದರ್ಶಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ನಗರದ ಅಪರ್ಣಾ ಸತೀಶ ಪ್ರಭು ಕೇದಾರನಾಥ ದೇವಾಲಯದಲ್ಲಿ ಆಸ್ಪತ್ರೆ ಸ್ಥಾಪನೆಗೆ ಪ್ರಾರ್ಥಿಸಿದವರಾಗಿದ್ದಾರೆ. ಈಚೆಗೆ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ ಅವರು, ಪ್ರಖ್ಯಾತ ಧಾರ್ಮಿಕ ತಾಣದ ಎದುರು ಜಿಲ್ಲೆಯ ಜನರ ಬೇಡಿಕೆಯ ಕುರಿತ ವಿಷಯವನ್ನು ಬ್ಯಾನರ್ ಮೂಲಕ ಪ್ರದರ್ಶಿಸಿದ್ದರು.
ಜಿಲ್ಲೆಯ ಜನರು ತೀವ್ರ ಅನಾರೋಗ್ಯಕ್ಕೆ ತುತ್ತಾದರೆ, ಅವಘಡ ಸಂಭವಿಸಿದರೆ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ ಇಲ್ಲ. ಕ್ರಿಮ್ಸ್ ಸ್ಥಾಪನೆಯಾಗಿದ್ದರೂ, ಅದನ್ನು ಮೇಲ್ದರ್ಜೆಗೇರಿಸಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗಿಸಲು ಕ್ರಮವಾಗಿಲ್ಲ. ಹೀಗಾಗಿ ಈ ಬಗ್ಗೆ ಗಮನ ಸೆಳೆಯಲು ದೇಶದ ಆಕರ್ಷಣೀಯ ಸ್ಥಳದ ಎದುರು ಬ್ಯಾನರ್ ಪ್ರದರ್ಶಿಸಬೇಕಾಯಿತು ಎಂದು ಅಪರ್ಣಾ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಒತ್ತಡ ಹೆಚ್ಚುತ್ತಿದ್ದು, ಅದಕ್ಕಾಗಿ ಪ್ರತಿಭಟನೆ, ಹೋರಾಟ ನಡೆಸಲು ಅನೇಕ ಸಂಘಟನೆಗಳು ಸಜ್ಜುಗೊಂಡಿವೆ.