ಶಿರಸಿ: ಸುಜ್ಞಾನ ಸೇವಾ ಫೌಂಡೇಶನ್ ಹಾಗೂ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2023 ರ ವಿಜೇತರಿಗೆ ಬಹುಮಾನ ವಿತರಣೆ, ಶ್ರೀಕೃಷ್ಣ ಗಾನಾಮೃತ, ಶ್ರೀಕೃಷ್ಣ ನೃತ್ಯಾಮೃತ ಮತ್ತು ಪ್ರತಿಷ್ಠಿತ ಸುಜ್ಞಾನ ಸೇವಾ, ಸುಜ್ಞಾನ ಸಮ್ಮಾನ, ಸುಜ್ಞಾನ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಒಳಗೊಂಡ ಶ್ರೀಕೃಷ್ಣಾರ್ಪಣಂ ಸಮಾರಂಭವು ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ಸೆ. 30 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಶ್ರೀಮಠದಲ್ಲಿ ಬಿಡುಗಡೆಗೊಳಿಸಿ, ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ, ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀಪಾದ ಭಟ್ಟ ಥಂಡಿಮನೆ, ಅಶೋಕ ಭಟ್ಟ ಉಜಿರೆ, ಸುಜ್ಞಾನ ಸೇವಾ ಫೌಂಡೇಶನ್ ಅಧ್ಯಕ್ಷ ಜಿ.ಎನ್.ಭಟ್ಟ ತಟ್ಟಿಗದ್ದೆ, ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ಟ ಯಲ್ಲಾಪುರ, ಪ್ರಮುಖರಾದ ಪ್ರಕಾಶ ಶೇಟ್, ಪೂಜಾ ಶೇಟ್ ಹಾಗೂ ಸಂಘಟನೆಯ ಪ್ರಮುಖರು ಇದ್ದರು.
ಶ್ರೀಕೃಷ್ಣಾರ್ಪಣಂ ಸಮಾರಂಭವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ. ಸುಜ್ಞಾನ ಸೇವಾ ಫೌಂಡೇಶನ್ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ವಿಕೇಂದ್ರೀಕರಣ ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಡಿಸಿಎಫ್ ಎಸ್.ಜಿ.ಹೆಗಡೆ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಸಮಾಜಸೇವಕ ಶಿವಲಿಂಗಯ್ಯ ಅಲ್ಲಯ್ಯನವರಮಠ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ತಾಲೂಕಾ ಅಧ್ಯಕ್ಷ ನಂದನ ಬಾಳಗಿ, ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ನಿವೃತ್ತ ತಹಸೀಲ್ದಾರ್ ಡಿ.ಜಿ.ಹೆಗಡೆ, ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕಾರ, ಅ.ಭಾ.ಸಾ.ಪ.ತಾಲೂಕಾ ಅಧ್ಯಕ್ಷ ಜಿ.ಎಸ್.ಗಾಂವ್ಕಾರ, ಪತ್ತಾರ್ ಸ್ಟುಡಿಯೋ ಮಾಲೀಕ ಗಣೇಶ ಪತ್ತಾರ್, ಅಡಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ನಾಟಿ ವೈದ್ಯ ನಾರಾಯಣ ಹೆಗಡೆ ಗವೇಗುಳಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸುಜ್ಞಾನ ಸೇವಾ ಫೌಂಡೇಶನ್ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ತಿಳಿಸಿದ್ದಾರೆ.