ಉಡುಪಿ: ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿರುವ ಪರಶುರಾಮ ಪ್ರತಿಮೆಯನ್ನು ಅಸಲಿ ಎಂದೂ ಹೇಳಲಾಗುತ್ತಿಲ್ಲ, ನಕಲಿ ಎಂದೂ ಹೇಳಲಾಗುತ್ತಿಲ್ಲ. ಅದು ಅರ್ಧ ನಕಲಿ– ಅರ್ಧ ಅಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
ಪರಶುರಾಮ ಪ್ರತಿಮೆ ಇರುವ ಥೀಂ ಪಾರ್ಕ್ಗೆ ಭೇಟಿನೀಡಿ ಪರಿಶೀಲಿಸಿದ ಸಚಿವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಪರಶುರಾಮನ ಪ್ರತಿಮೆಯ ಕೈ, ಮುಖ ಸೇರಿದಂತೆ ಪ್ರತಿಮೆಯ ಅರ್ಧ ಭಾಗವನ್ನೇ ಬದಲಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು. ಪರಶುರಾಮ ಪ್ರತಿಮೆ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲಾಗಿದೆ. ವಿಧಾನಸಭಾ ಚುನಾವಣೆ ಹತ್ತಿರ ಇರುವಾಗ ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಹೋಗಿ ಹಲವು ತಪ್ಪುಗಳನ್ನು ಎಸಗಿರುವುದು ಕಂಡುಬAದಿದೆ. ಯಾವ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.
ಸದ್ಯ ಪ್ರತಿಮೆ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕಿಂತ ಜನರ ಸುರಕ್ಷತೆ ಮುಖ್ಯವಾಗಿದೆ. ಪ್ರತಿಮೆ ಎತ್ತರದ ಪ್ರದೇಶದಲ್ಲಿರುವುದರಿಂದ ಮಳೆ ಗಾಳಿಗೆ ಬಿದ್ದು ಅವಘಡಗಳಾದರೆ ಯಾರು ಹೊಣೆ ಎಂಬ ಆತಂಕ ಕಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಮೆ ಸುರಕ್ಷಿತವಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಮೆ ನಿರ್ಮಾಣ ಮಾಡಿರುವ ಬೆಂಗಳೂರಿನ ಕಲಾವಿದರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಹಿನ್ನೆಲೆ: ಇದೇ ವರ್ಷ ಜನವರಿ 27ರಂದು 33 ಅಡಿ ಎತ್ತರದ 15 ಟನ್ ತೂಕದ ಪರಶುರಾಮನ ಪ್ರತಿಮೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು. ಆಗ ಸಚಿವರೂ ಆಗಿದ್ದ ಕಾರ್ಕಳ ಶಾಸಕ ವಿ.ಸುನಿಲ್ಕುಮಾರ್ ನೇತೃತ್ವದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿತ್ತು. ಪರಶುರಾಮ ಥೀಂ ಪಾರ್ಕ್ ನಿರ್ಮಾಣಕ್ಕೆ 15 ಕೋಟಿ ವೆಚ್ಚವಾಗಿದ್ದು, ಪ್ರತಿಮೆಗೆ 2 ಕೋಟಿ ವ್ಯಯಿಸಲಾಗಿದೆ. ಉಡುಪಿ ನಿರ್ಮಿತಿ ಕೇಂದ್ರ ಕಾಮಗಾರಿಯ ಹೊಣೆ ಹೊತ್ತುಕೊಂಡಿದೆ. ಪರಶುರಾಮ ಪ್ರತಿಮೆ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.