ನವದೆಹಲಿ: 2014ರಲ್ಲಿ ಸಂಸದರಾಗಿ ಸಂಸತ್ತಿಗೆ ಮೊದಲ ಬಾರಿಗೆ ಕಾಲಿಟ್ಟ ಭಾವುಕ ಕ್ಷಣವನ್ನು ಮೆಲುಕು ಹಾಕಿದ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವದ ದೇಗುಲಕ್ಕೆ ಗೌರವ ಸಲ್ಲಿಸಿದ ಕುರಿತು ಮಾತನಾಡಿದರು. ಅಲ್ಲದೇ ವಿನಮ್ರ ಹಿನ್ನೆಲೆಯ ಮಗು ಸಂಸತ್ತಿಗೆ ಪ್ರವೇಶಿಸಬಹುದು ಎಂಬುದು ಸಾಬೀತುಗೊಂಡಿತು ಎಂದಿದ್ದಾರೆ..
ಲೋಕಸಭೆಯಲ್ಲಿ ‘ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು’ ಕುರಿತು ಚರ್ಚೆಗೆ ಚಾಲನೆ ನೀಡಿದ ಪ್ರಧಾನಿ, ಹೊಸ ಸಂಸತ್ ಭವನಕ್ಕೆ ಬದಲಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದರು.ಸಂಸತ್ತಿನ ವಿಶೇಷ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಶುಕ್ರವಾರದವರೆಗೆ ನಡೆಯಲಿದ್ದು, ಪ್ರಸ್ತುತ ಕಟ್ಟಡ ಹಲವು ಕಹಿ-ಸಿಹಿ ನೆನಪುಗಳನ್ನು ಇಟ್ಟುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಕಟ್ಟಡಕ್ಕೆ ವಿದಾಯ ಹೇಳುವುದು ಒಂದು ಭಾವನಾತ್ಮಕ ಕ್ಷಣವಾಗಿದೆ. ಇದರಲ್ಲಿ ನಾವು ಭಿನ್ನಾಭಿಪ್ರಾಯಗಳು ಮತ್ತು ಏಕತೆ ಎರಡನ್ನೂ ಅನುಭವಿಸಿದ್ದೇವೆ” ಎಂದರು. ಸಂಸತ್ತಿನಲ್ಲಿ ತಮ್ಮ ಆರಂಭಿಕ ದಿನಗಳನ್ನು ಪ್ರತಿಬಿಂಬಿಸಿದ ಅವರು, “ನಾನು ಸಂಸದನಾಗಿ ಈ ಸಂಸತ್ ಭವನಕ್ಕೆ ಮೊದಲ ಬಾರಿಗೆ ಕಾಲಿಟ್ಟಾಗ, ನಾನು ಪ್ರಜಾಪ್ರಭುತ್ವದ ಮಂದಿರಕ್ಕೆ ನನ್ನ ನಮನ ಸಲ್ಲಿಸಿದೆ. ಇದು ನನಗೆ ಆಳವಾದ ಭಾವನಾತ್ಮಕ ಕ್ಷಣವಾಗಿತ್ತು. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ವಾಸಿಸುವ ಬಡ ಕುಟುಂಬವು ಸಂಸತ್ತಿಗೆ ಬರಬಹುದು ಎಂದು ನಾನು ಯೋಚಿಸಿಯೇ ಇರಲಿಲ್ಲ. ನಾನು ಜನರಿಂದ ಇಷ್ಟೊಂದು ಪ್ರೀತಿಯನ್ನು ಪಡೆಯುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ.