ಗೋಕರ್ಣ: ಮಾತೃತ್ವ ಎನ್ನುವುದು ಮನುಕುಲದ ಉದ್ಧಾರಕ್ಕೆ ದೇವರು ನೀಡಿದ ದೊಡ್ಡ ವರ. ಮಾತೃತ್ವ ಬಗೆಗಿನ ತಿರಸ್ಕಾರದ ಭಾವನೆ ಅಪಾಯಕಾರಿ ಬೆಳವಣಿಗೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ನಡೆದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡಿ, ಮಾತೃತ್ವ ಇಂದು ಅಪಾಯದಲ್ಲಿದೆ. ಆದರೆ ಇದು ಅಪೇಕ್ಷಿತವಾಗಬೇಕು. ಜನಸಂಪತ್ತು ಎಂದೂ ದೇಶಕ್ಕೆ ಹೊರೆಯಲ್ಲ. ಸಮಾಜ ಸಂಪೂರ್ಣವಾಗಿ ಕ್ಷಯಿಸುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಹವ್ಯಕ ಮಹಾಮಂಡಲದ ನಿಕಟಪೂರ್ವ ಮಾತೃಪ್ರಧಾನರಾದ ದೇವಿಕಾ ಶಾಸ್ತ್ರಿ ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಅಧ್ಯಕ್ಷೆ ಶುಭಮಂಗಳ, ಗಾಯಕಿ ವಸುಧಾ ಶರ್ಮಾ, ಹವ್ಯಕ ಮಹಾಮಂಡಲ ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಹವ್ಯಕ ಮಹಾಮಂಡಲದ ಹನ್ನೊಂದು ಮಂಡಲಗಳಿoದ ಆಗಮಿಸಿದ ಸಾವಿರಾರು ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾವೇಶದ ಅಂಗವಾಗಿ ಶ್ರೀರಾಜರಾಜೇಶ್ವರಿ, ಮಾತೆಯಿಂದ ಕುಂಕುಮಾರ್ಚನೆ ನಡೆದವು.
ಆತ್ಮದ ಅನುಭೂತಿ ಸರ್ವಶ್ರೇಷ್ಠ. ದೇಹ, ಇಂದ್ರಿಯಗಳು ಸ್ತಬ್ಧವಾದಾಗ ಮಾತ್ರ ಆತ್ಮಸುಖದ ಅನುಭವವಾಗುತ್ತದೆ. ಅದುವೇ ಸರ್ವಶ್ರೇಷ್ಠ ಸುಖ. ಆತ್ಮದ ಧ್ವನಿ ಓಂಕಾರ. ಈ ಧ್ಯಾನ ಸುಖವನ್ನು ಅನುಭವಿಸುವುದೇ ಮುಕ್ತಿ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಶನಿವಾರ ಹುಬ್ಬಳ್ಳಿ- ಧಾರವಾಡ, ಹಾವೇರಿ, ದಾವಣಗೆರೆ, ರಾಣೆಬೆನ್ನೂರು ವಲಯಗಳ ಶಿಷ್ಯಭಕ್ತರಿಂದ ಭಿಕ್ಷಾಸೇವೆ ಸ್ವೀಕರಿಸಿ ‘ಸುಖ ಬರುವ ದಾರಿ’ ಎಂಬ ವಿಷಯದ ಬಗ್ಗೆ ಶ್ರೀಸಂದೇಶ ನೀಡಿದರು. ಧರ್ಮದ ದಾರಿಯಲ್ಲಿ ಬರುವ ಸುಖ ಮುಖ್ಯ. ನಿಜಕರ್ಮದಿಂದ ಬರುವ ಸಂತೋಷ ಶಾಶ್ವತ. ನಾವು ಕರ್ತವ್ಯ ಮಾಡುವ ಮೂಲಕ ಪಡೆಯುವ ಸುಖ ಶ್ರೇಷ್ಠ. ಅಂತೆಯೇ ಪರೋಪಕಾರ, ಯಜ್ಞ, ದಾನ ತಪಸ್ಸು ಪರಿಪೂರ್ಣ ಸುಖದ ಕಡೆಗೆ ಒಯ್ಯುವ ಸಾಧನಗಳು ಎಂದು ಬಣ್ಣಿಸಿದರು. ಮರಾಠಿ ಸಮಾಜದ ವತಿಯಿಂದ ಚಾತುರ್ಮಾಸ್ಯ ಅಂಗವಾಗಿ ಪಾದಪೂಜೆ ನೆರವೇರಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಆರ್.ಜಿ.ಭಟ್ ಹುಬ್ಬಳ್ಳಿ-ಧಾರವಾಡ ವಲಯದ ಅಧ್ಯಕ್ಷರಾಗಿ, ಗಜಾನನ ಭಾಗವತ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಗಳಿಂದ ನಿಯುಕ್ತಿ ಪತ್ರ ಪಡೆದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಮಾತನಾಡಿದರು. ವಿವಿವಿ ಪ್ರಾಚೀನ ಶಿಕ್ಷಣ ವಿಭಾಗದ ಮುಖ್ಯಸ್ಥ ಆ.ಪು.ನಾರಾಯಣಪ್ಪ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ವಿವಿವಿ ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಉಪಸ್ಥಿತರಿದ್ದರು. ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಸದಸ್ಯರಿಂದ ಪಾದುಕಾ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಳೆ ನಡೆಯಿತು.