Slide
Slide
Slide
previous arrow
next arrow

ಕೆ. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಕೆಕ್ಕಾರ್ ನಾಗರಾಜ ಭಟ್ ಆಯ್ಕೆ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ನೀಡುವ 2023ನೇ ಸಾಲಿನ ಪ್ರತಿಷ್ಠಿತ ಕೆ. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಪತ್ರಕರ್ತ ಸಿದ್ದಾಪುರದ ಸಂಯುಕ್ತ ಕರ್ನಾಟಕ ವರದಿಗಾರ ಕೆಕ್ಕಾರ ನಾಗರಾಜ ಭಟ್ ಆಯ್ಕೆಯಾಗಿದ್ದಾರೆ.

ಕಳೆದ ಜೂನ್ ತಿಂಗಳಿನಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಶ್ಯಾಮ್‌ರಾವ್ ಪ್ರಶಸ್ತಿ ಆಯ್ಕೆಗೆ ಐದು ಜನರ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಶಿಫಾರಸ್ಸಿನ ಮೇರೆಗೆ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಒಳಗೊಂಡ ಸಮಿತಿಯು ಕೆಕ್ಕಾರ ನಾಗರಾಜ ಭಟ್ ಅವರನ್ನು ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಅಂತಿಮಗೊಳಿಸಿದ್ದಾರೆ.

ಕೆಕ್ಕಾರ ನಾಗರಾಜ ಭಟ್ ಅವರು ಕಳೆದ 37 ವರ್ಷಗಳಿಂದ ವಿವಿಧ ಪತ್ರಿಕೆಗಳಿಗೆ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಜನಮಾಧ್ಯಮ ಪತ್ರಿಕೆಗಳಿಗೆ ಸಿದ್ದಾಪುರ ತಾಲೂಕಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸುದ್ದಿ ಲೇಖನ ಬರೆದು ಸಮಾಜದ ಕಣ್ಣು ತೆರೆಸುವ ಕಾರ್ಯಮಾಡಿದ್ದಾರೆ. ಸಿದ್ದಾಪುರ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿಶೇಷ ಲೇಖನ ಪ್ರಕಟಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.

300x250 AD

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಸಿದ್ದಾಪುರ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಸಿದ್ದಾರಲ್ಲದೆ ಪ್ರಸ್ತುತ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಸಿದ್ದಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಭಾರತ ಸೇವಾದಳದ ಸಿದ್ದಾಪುರ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿವರ್ಷ ಸಿದ್ದಾಪುರ ತಾಲೂಕಿನ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯನ್ನು ಗುರುತಿಸಿ ’ಗುರುಮನೆ ದತ್ತಿನಿಧಿ’ ಪ್ರಶಸ್ತಿಯನ್ನು ವೈಯಕ್ತಿಕವಾಗಿ ನೀಡುತ್ತಿದ್ದಾರೆ.
ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಇವರ ಸೇವೆಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದು 2016ರಲ್ಲಿ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ನೀಡುವ ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿನಿಧಿ ಪುರಸ್ಕಾರ ದೊರೆತಿದೆ. 2011ರಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಬೆಂಗಳೂರು ಅವರಿಂದ ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ “ವಿದ್ವತ್ ಸಂಮಾನ”, 2018ರಲ್ಲಿ ಶ್ರೀ ಆಂಜನೇಯ ಕೃಪಾ ಯಕ್ಷವೃಂದ ಕೇಡಲಸರ ಇವರಿಂದ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಪ್ರದರ್ಶನ ಕುರಿತ ವಿಮರ್ಶಾತ್ಮಕ ಬರವಣಿಗೆಗಾಗಿ “ಯಕ್ಷರಾಜ ಪ್ರಶಸ್ತಿ”, 2019 ರಲ್ಲಿ ಶ್ರೀಸೇವಾ ಸಂಕಲ್ಪ ಟ್ರಸ್ಟ್‌ನವರಿಂದ ಕನ್ನಡಪರ ಕಾರ್ಯಕ್ರಮ ಸಂಘಟನೆಗಾಗಿ ಗೌರವ ಸಂಮಾನ, 2021 ರಲ್ಲಿ ಬೆಂಗಳೂರಿನ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆ “ಆಭಾರಿ”ಯಿಂದ ಗೌರವ ಸಂಮಾನ ಹಾಗೂ 2022 ರಲ್ಲಿ ಕನ್ನಡ ಸೇನೆ ಸಂಘಟನೆಯಿಂದ “ಕದಂಬ ರತ್ನ” ಪ್ರಶಸ್ತಿಗೆ ಕೆಕ್ಕಾರ ನಾಗರಾಜ ಭಟ್ ಭಾಜನರಾಗಿದ್ದಾರೆ.

2023ರ ಸೆಪ್ಟೆಂಬರ್ ಕೊನೆಯವಾರದಲ್ಲಿ ಅಥವಾ ಅಕ್ಟೋಬರ್‌ನಲ್ಲಿ ನಡೆಯವ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೆ. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top