ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದ ಅಪಾರ ಹಾನಿ ಸಂಭವಿಸಿರುವoತೆಯೇ ಕೇಂದ್ರ ಹಣಕಾಸು ಸಚಿವಾಲಯವು ಆಯಾ ರಾಜ್ಯ ವಿಪತ್ತು ಪರಿಹಾರ ನಿಧಿಗಾಗಿ 22 ರಾಜ್ಯ ಸರ್ಕಾರಗಳಿಗೆ ಬುಧವಾರ ರೂ. 7,532 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.
ದೇಶಾದ್ಯಂತ ಭಾರೀ ಮಳೆಯ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಗಿದೆ ಮತ್ತು ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ಒದಗಿಸಲಾದ ಮೊತ್ತದ ಬಳಕೆಯ ಪ್ರಮಾಣಪತ್ರಕ್ಕಾಗಿ ಕಾಯದೆ ರಾಜ್ಯಗಳಿಗೆ ತಕ್ಷಣದ ಸಹಾಯಕ್ಕಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾ ಸಾಮಾನ್ಯ ರಾಜ್ಯಗಳಲ್ಲಿ ಎಸ್‌ಡಿಆರ್‌ಎಫ್‌ಗೆ ಶೇಕಡಾ 75 ಮತ್ತು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಲ್ಲಿ ಶೇಕಡಾ 90ರಷ್ಟು ಕೊಡುಗೆ ನೀಡುತ್ತದೆ. ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ವಾರ್ಷಿಕ ಎರಡು ಸಮಾನ ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ, ಹಿಂದಿನ ಕಂತಿನಲ್ಲಿ ಬಿಡುಗಡೆಯಾದ ಮೊತ್ತದ ಬಳಕೆಯ ಪ್ರಮಾಣಪತ್ರದ ಸ್ವೀಕೃತಿ ಮತ್ತು ಎಸ್‌ಡಿಆರ್‌ಎಫ್‌ನಿಂದ ಕೈಗೊಂಡ ಚಟುವಟಿಕೆಗಳ ಕುರಿತು ರಾಜ್ಯ ಸರ್ಕಾರದಿಂದ ವರದಿಯನ್ನು ಸ್ವೀಕರಿಸಿದ ನಂತರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.