ಶಿರಸಿ: ಪ್ರತಿಯೊಬ್ಬರೂ ಗಿಡ ನೆಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಮಕ್ಕಳ ಹೆಸರಿನಲ್ಲಿ ಗಿಡ ನೆಡುವುದರ ಜತೆಗೆ ಕುಲ ದೇವರು, ಕುಲ ಗುರುವಿನ ಹೆಸರಿನಲ್ಲೂ ಗಿಡ ನೆಟ್ಟು ಸಂರಕ್ಷಿಸಿ, ಪರಿಸರದ ಉಳಿವಿಗೆ ಕಾರಣ ಆಗಬೇಕು ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ನಿರ್ದೇಶಕ ಶ್ರೀನಿವಾಸ್ ಹೆಬ್ಬಾರ್ ಹೇಳಿದರು.
ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸ್ಯ ಸಂತೆ ಕಾರ್ಯಕ್ರಮಕ್ಕೆ, ಮಗುವಿಗೆ ಸಸ್ಯ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದ ಶ್ರೀನಿವಾಸ್ ಹೆಬ್ಬಾರ್, ಕದಂಬ ಸಂಸ್ಥೆಯು ಸಸ್ಯ ಸಂತೆಯನ್ನು ಕಳೆದ ಹದಿನಾಲ್ಕು ವರ್ಷದಿಂದಲೂ ಮಾಡುತ್ತಾ ಬಂದಿದೆ. ಈ ಸಂಸ್ಥೆ ಹೆಸರು ರಾಜ್ಯದಲ್ಲಿ ಮಾತ್ರವಲ್ಲ, ಹಲವು ದೇಶಗಳಲ್ಲೂ ಇದೆ. ಇದೇ ರೀತಿ ಪ್ರತಿವರ್ಷ ತನ್ನ ಕಾರ್ಯವಲಯವನ್ನು ವಿಸ್ತರಿಕೊಳ್ಳುವ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಾಗಲಿ ಎಂದ ಆಶಿಸಿದರು.
ಜುಲೈ ತಿಂಗಳು ಬಂದರೂ ಕೂಡ ವಾಡಿಕೆಯಷ್ಟು ಮಳೆಯಾಗಿಲ್ಲ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಕೆರೆಗಳೆಲ್ಲ ಬತ್ತಿ ಹೋಗಿವೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ಎದುರಾಗಿದೆ. ಹಿಂದಿನ ಕಾಲದಲ್ಲಿ ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಆದರೆ ಇದೀಗ ಕೆರೆಗಳು ಹೂಳು ತುಂಬಿ ಮುಚ್ಚಿ ಹೋಗುತ್ತಿವೆ. ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರೂ ಕೂಡ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ತಮ್ಮೂರಿನ ಕೆರೆಗಳ ಬಗ್ಗೆ ಕಾಳಜಿ ವಹಿಸಿ, ನೀರನ್ನು ಉಳಿಸಿ, ಸಸ್ಯಗಳನ್ನು ಬೆಳೆಸಿ ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ ಮಾತನಾಡಿ, ರೈತರಿಗೆ ಅತ್ಯಂತ ಗುಣಮಟ್ಟದ ಭರವಸೆಯ ತಳಿ ಕೊಡಬೇಕು ಎಂಬುದು ನಮ್ಮ ಆಶಯ. 13 ವರ್ಷದ ಹಿಂದೆ ಕೊಟ್ಟ ಗಿಡಗಳು ಈಗ ಫಲ ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕದಂಬ ಮುಖ್ಯಸ್ಥ ವಿಶ್ವೇಶ್ವರ ಭಟ್ಟ ಕೋಟೆಮನೆ, ಜಿ.ಆರ್. ಹೆಗಡೆ ಬೆಳ್ಳೇಕೇರಿ, ಗಣಪತಿ ಹೆಗಡೆ ಮುರೇಗಾರ, ಕ್ಲಾಪ್ಸ್’ನ ಗಣೇಶ ಹೆಗಡೆ ಸಣ್ಣಕೇರಿ, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೋಶಿ, ಮಂಜುನಾಥ ಹೆಗಡೆ ಇತರರು ಇದ್ದರು.