ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ 33ನೇ ಚಾತುರ್ಮಾಸ್ಯ ವ್ರತಾಚರಣೆ ಜುಲೈ 3ರಂದು ಸಂಕಲ್ಪಿಸಲಿದ್ದಾರೆ. ಈ ವ್ರತಾಚರಣೆ ಮೂರು ತಿಂಗಳ ಕಾಲ ನಡೆದು ಸೆಪ್ಟೆಂಬರ್ 29ರಂದು ಪೂರ್ಣವಾಗಲಿದೆ.
ಬೆಳಿಗ್ಗೆ 10ಕ್ಕೆ ಶ್ರೀಗಳು ಶ್ರೀವೇದ ವ್ಯಾಸರ ಪೂಜೆ ನಡೆಸಿ ವ್ರತ ಸಂಕಲ್ಪ ಮಾಡಲಿದ್ದಾರೆ. ಬಳಿಕ ಸಮಸ್ತ ಶಿಷ್ಯರ ಪರವಾಗಿ ಪಾದುಕಾ ಪೂಜೆ ನಡೆಯಲಿದೆ. ಚಾತುರ್ಮಾಸ್ಯ ಅವಧಿಯಲ್ಲಿ ಶಿಷ್ಯರು ಮಠಕ್ಕೆ ಆಗಮಿಸಿ ಗುರು ಸೇವೆ ನಡೆಸಲಿದ್ದಾರೆ
ಈ ದಿನಗಳಲ್ಲಿ ಪ್ರತಿ ದಿನ ಋಗ್ವೇದ, ಕೃಷ್ಣಜುರ್ವೇದ, 18 ಪುರಾಣಗಳು, ಮಹಾಭಾರತ ಪಾರಾಯಣಗಳು, ಪ್ರವಚನಗಳು ನಡೆಯಲಿದೆ.
ಶ್ರೀಗಳ ಚಾತುರ್ಮಾಸ್ಯ ಆರಂಭದ ಹಿನ್ನಲೆಯಲ್ಲಿ ಜು.3ರಂದು ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಪಾಲ್ಗೊಳ್ಳುವರು.
ಖ್ಯಾತ ವೈದ್ಯ ದಾವಣಗೆರೆಯ ಡಾ. ಎಸ್.ಆರ್.ಹೆಗಡೆ, ವಾತುಲಾಗಮ ವಿದ್ವಾಂಸ ವೇ. ಗಜಾನನ ಹಿರೇ ಭಟ್ಟ ಗೋಕರ್ಣ, ದಕ್ಷ ಆಡಳಿತಗಾರ ರಘುಪತಿ ಎನ್.ಭಟ್ಟ ಸುಗಾವಿ, ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರನ್ನು ಶ್ರೀಗಳು ಗೌರವಿಸಲಿದ್ದಾರೆ. ಶ್ರೀಗಳೇ ಬರೆದ ಲೇಖನಗಳ ಸಂಕಲನ ಗುರುವಾಣಿ ಕೃತಿ ಬಿಡುಗಡೆ ಕೂಡ ಆಗಲಿದೆ. ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠಕ್ಕೆ ಆಗಮಿಸುವಂತೆ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ತಿಳಿಸಿದ್ದಾರೆ.