ಅಂಕೋಲಾ:ತಾಲೂಕಿನ ಬ್ರಹ್ಮೂರಿನಲ್ಲಿ ಮನೆಯಿಂದ ಹೊರ ಹೋದ ವ್ಯಕ್ತಿಯೋರ್ವ ಮನೆಗೆ ಮರಳದೇ, ಊರಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾದ ಘಟನೆ ಗುರುವಾರ ನಡೆದಿದೆ. ಬ್ರಹ್ಮೂರು ನಿವಾಸಿ ಶಿವರಾಮ ಟಿ ಮರಾಠೆ (48) ಮೃತ ದುರ್ದೈವಿಯಾಗಿದ್ದು ಈತ ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದವನು, ಮರಳಿ ಬಂದಿರಲಿಲ್ಲ.
ಇದರಿಂದ ಗಾಬರಿಗೊಂಡ ಆತನ ಕುಟುಂಬಸ್ಥರು, ಸಂಬಂಧಿಗಳು, ಊರವರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದು, ಗುರುವಾರ ಬೆಳಗ್ಗೆ ಸಮೀಪದ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತ ದೇಹ ಪತ್ತೆಯಾಗಿದೆ. ವಿಪರೀತ ಸಾರಾಯಿ ಕುಡಿಯುತ್ತಿದ್ದ ಎನ್ನಲಾದ ಈತ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಂಕೋಲಾ ಪಿ.ಎಸ್. ಐ ಉದ್ದಪ್ಪ ಎ.ಡಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಘಟನಾ ಸ್ಥಳದಿಂದ, ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.