ಶಿರಸಿ: ನಗರದ ಲಿಂಗದಕೋಣ ಕಲ್ಯಾಣಮಂಟಪದಲ್ಲಿ ಜೂ.29ರಂದು ನಡೆದ ವನಸ್ತ್ರೀ ಮಲೆನಾಡು ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶಿರಸಿ ಅರಣ್ಯ ವಿಭಾಗದ ಡಿಎಪ್ಒ ಅಜ್ಜಯ್ಯ.ಜಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕುಂಬಳ ಜಾತಿಯ ಖಾಧ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನವನ್ನು ನೀಡಿ ಮಾತನಾಡುತ್ತಾ, ಮಹಿಳೆಯರು ತಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ,ವ್ಯಕ್ತಿತ್ವದ ವಿಕಸನದಲ್ಲಿ ಇಂತಹ ಸಂಘಟನೆಗಳಲ್ಲಿ ಪಾಲ್ಗೊಳ್ಳುವ ಅನುಭವವು ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ. ಸ್ವತಂತ್ರ ವ್ಯಕ್ತಿತ್ವ ಬೆಳೆದು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪೂರಕವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವನಸ್ತ್ರೀ 20ನೆಯ ಮಲೆನಾಡು ಮೇಳ ನಡೆಸುತ್ತಿರುವ ನೆನಪಿಗೆ ಹಿರಿಯ ಸದಸ್ಯರಿಗೆ ಗಿಡಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸದಸ್ಯೆ ಭಾಗ್ಯ ಭಟ್ಟ ಸೋಂದಾ, ಮಲೆನಾಡು ಮೇಳ ಇಪ್ಪತ್ತನೆಯ ವರ್ಷ ಪೂರೈಸುತ್ತಿರುವದು ಸಂಭ್ರಮದ ಕ್ಷಣ.ಮುಂದೆಯೂ ಇದೇ ಸಂಭ್ರಮದಲ್ಲಿ ಮಲೆನಾಡು ಮೇಳವನ್ನ ನಡೆಸಿಕೊಂಡು ಹೋಗೋಣ ಎಂದರು.
ಈ ಸಂದರ್ಭದಲ್ಲಿ ವನಸ್ತ್ರೀ ಸದಸ್ಯೆಯರಾದ ಶರ್ವಾಣಿ ಭಟ್, ನಂದನಾ ಜೋಶಿ, ಶೋಭಾ ಹೆಗಡೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಂಕೇತಾ ನಾಯಕ್ ಸ್ವಾಗತಿಸಿದರು. ಉಮಾ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.