ಯಲ್ಲಾಪುರ: ಸಾಹಿತ್ಯದ ಓದು ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುತ್ತದೆ. ಸರಿಯಾದ ಆಲೋಚನಾ ಕ್ರಮವನ್ನು ರೂಪಿಸುತ್ತದೆ ಎಂದು ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಂಚಿಕೇರಿ ಘಟಕ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಿದ ಉಪನ್ಯಾಸ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದು, ಸಾಹಿತ್ಯದ ಓದಿನ ಅಭ್ಯಾಸ ಕಡಿಮೆಯಾಗುತ್ತಿದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ತಾಲ್ಲೂಕಾಧ್ಯಕ್ಷ ಜಿ.ಎಸ್.ಗಾಂವ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿಗಳು ನಮಗೆ ನೆಮ್ಮದಿ ನೀಡುತ್ತವೆ. ಸಾಹಿತ್ಯ ಬದುಕಿನಲ್ಲಿ ಸಾಗಬೇಕಾದ ದಾರಿಯನ್ನು ನಿರ್ದೇಶಿಸುತ್ತದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಡಾ.ರವೀಂದ್ರ ಜಿ., ಭಾರತದ ಇತಿಹಾಸದ ಕುರಿತು ಉಪನ್ಯಾಸ ನೀಡಿದರು. ಜೌರಂಗಜೇಬ, ಬಾಬರ್ ಮೊದಲಾದವರ ತಪ್ಪುಗಳನ್ನು ಇಂದಿನವರ ಮೇಲೆ ಹಾಕುವುದು ಸರಿಯಲ್ಲ. ಜಗತ್ತಿನ ಅನೇಕ ಸಂಸ್ಕೃತಿಗಳು ಹೇಳ ಹೆಸರಿಲ್ಲದಂತೆ ನಾಶವಾಗಿವೆ. ಆದರೆ ಭಾರತದ ಸಂಸ್ಕೃತಿ ಜೀವಂತವಾಗಿದೆ. ಎಂದರು.
ಪ್ರಾಧ್ಯಾಪಕ ಡಾ.ಕೆ.ಸಿ.ನಾಗೇಶ ಭಟ್ಟ ಸಾಹಿತ್ಯದಲ್ಲಿ ಭಾರತೀಯತೆ ಕುರಿತು ಉಪನ್ಯಾಸ ನೀಡಿ ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಸಾಹಿತ್ಯ ಬೇರೆ ಬೇರೆ ಅಲ್ಲ. ನಮ್ಮ ಸಂಸ್ಕೃತಿ ಉಳಿದರೆ ಭಾರತ ಉಳಿಯುತ್ತದೆ ಎಂದರು. ಸಿಂಧೂರ ಹೆಗಡೆ, ಆದ್ಯಾ ಹೆಗಡೆ, ಪದ್ಮಿನಿ ಶೇಟ್, ಸಾತ್ವಿಕ್, ಪರ್ಣಿಕಾ ಹೆಗಡೆ, ಪ್ರೇರಣಾ ಭಟ್ಟ, ಸನ್ನಿಧಿ ಹೆಗಡೆ, ದೀಪಿಕಾ ಭಟ್ಟ ಚಿಣ್ಣರ ಚಿಗುರು ಮಕ್ಕಳ ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.
ಮಂಗಲಾ ಭಾಗ್ವತ, ರಾಜಲಕ್ಷ್ಮಿ ಭಟ್, ಸುಜಾತಾ ದಂಟ್ಕಲ್, ಶರಾವತಿ ಶಿರ್ನಾಲಾ, ಅಕ್ಷಯ ಹೆಗಡೆ, ಲತಾ ಹೆಗಡೆ, ಸೌಮ್ಯಾ ನಾಯ್ಕ, ರಾಘವೇಂದ್ರ ಪಟಗಾರ, ದಾಕ್ಷಾಯಿಣಿ, ಉಷಾ ನಾಗರಾಜ್, ಜಯಪ್ರಕಾಶ ಹಬ್ಬು, ಸಾವಿತ್ರಿ ಮಾಸ್ಕೇರಿ, ವಿಮಲಾ ಭಾಗ್ವತ, ಪೂರ್ಣಿಮಾ ಹೆಗಡೆ, ನಾಗೇಶ ಹೊಸಳ್ಳಿ, ಶೋಭಾ ಭಟ್ಟ ಅನಿಲ್, ಉದಯಪ್ರಕಾಶ ಹಬ್ಬು ಹಿರಿಯರ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದರು. ಹಿರಿಯ ರಂಗಕರ್ಮಿ ಆರ್.ಎನ್. ಭಟ್ಟ ದುಂಡಿ, ಕೃಷ್ಣ ಪದಕಿ ಇದ್ದರು. ಅನಂತ ತಾಮ್ಹನ್ಕರ್ ಕವಿತೆಗಳನ್ನು ಅವಲೋಕಿಸಿದರು. ಪುಷ್ಪಾ ಮಾಳಕೊಪ್ಪ ಸ್ವಾಗತಿಸಿದರು. ಶ್ರೀರಾಮ ಲಾಲಗುಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಹೆಗಡೆ ಮತ್ತು ಆಶಾ ಶೆಟ್ಟಿ ನಿರ್ವಹಿಸಿದರು. ವಿನೇಶ ಮಾಳಕೊಪ್ಪ ವಂದಿಸಿದರು.