ಕಾರವಾರ: ಪ್ರಸಕ್ತ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಕೇಂದ್ರ ಚುನಾವಣಾ ಆಯೋಗವು ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ವಿಶೇಷವಾಗಿ ಒದಗಿಸಿರುವ ಮನೆಯಿಂದಲೇ ಮತದಾನ ಮಾಡುವ ಅವಕಾಶ ಬಳಸಿಕೊಂಡು ಪ್ರತಿಯೊಬ್ಬರೂ ತಪ್ಪದೇ ನಿರ್ಭೀತಿಯಿಂದ ಕಡ್ಡಾಯ ಮತ್ತು ನಿಷ್ಪಕ್ಷವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಖಂಡೂ ಹೇಳಿದರು.
ನಗರದ ಜಿಲ್ಲಾ ಪಂಚಾಯತ್‌ನ ಆವಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕಾರವಾರ ತಾಲೂಕು ಪಂಚಾಯತ್ ರವರ ವತಿಯಿಂದ ಸಾರ್ವಜನಿಕರಿಗೆ ಕಡ್ಡಾಯ ಹಾಗೂ ನಿಷ್ಪಕ್ಷಪಾತ ಮತದಾನ ಕುರಿತು ಅರಿವು ಮೂಡಿಸುವ ನಿಮಿತ್ತ ನಗರದಾದ್ಯಂತ ಆಯೋಜಿಸಿದ್ದ ವಿಶೇಷ ಚೇತನರ ತ್ರಿಚಕ್ರ ವಾಹನ ಜಾಥಾಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷಚೇತನರ ತ್ರಿಚಕ್ರ ವಾಹನ ಜಾಥಾವು ನಗರದ ಜಿಲ್ಲಾ ಪಂಚಾಯತ್‌ನಿಂದ ಪ್ರಾರಂಭವಾಗಿ ಡಾ.ಪಿಕಳೆ ಆಸ್ಪತ್ರೆ ಹತ್ತಿರದಿಂದ ಅಂಬೇಡ್ಕರ್ ವೃತ್ತದ ಮೂಲಕ ಕೋಡಿಭಾಗ ಮುಖ್ಯ ರಸ್ತೆ, ಕಾಜುಭಾಗ ಕ್ರಾಸ್‌ದಿಂದ ಶಿವಾಜಿ ಕಾಲೇಜು(ಬಾಡ) ತಲುಪಿ ಶಿವಾಜಿವಾಡಾ ರಸ್ತೆ ಮೂಲಕ ಕೋಡಿಭಾಗ ರಸ್ತೆಯಿಂದ ಅರ್ಜುನ ಚಿತ್ರ ಮಂದಿರ ಮಾರ್ಗವಾಗಿ ಎಂ.ಜಿ. ರಸ್ತೆ ಮೂಲಕ ಜಿಲ್ಲಾ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಲುಪಿ ನಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನದಲ್ಲಿ ಚುನಾವಣಾ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಮುಕ್ತಾಯವಾಯಿತು.