ಶಿರಸಿ: ಫಾರಂ ನಂ.3 ಸಮಸ್ಯೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಪ್ಪಿಲ್ಲದಿದ್ದರೂ ಅನಗತ್ಯವಾಗಿ ನಾವು ಜನರ ಅಸಮಾಧಾನ ಎದುರಿಸಬೇಕಾಗಿದೆ. ಈ ಸಮಸ್ಯೆ ಕುರಿತು ನ್ಯಾಯಾಂಗಕ್ಕೆ ತಿಳಿಸಬೇಕಾದ ಅಗತ್ಯತೆ ಇದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಕೆಂಗ್ರೆಯಲ್ಲಿ ನಗರಕ್ಕೆ ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಫಾರಂ ನಂ.3 ಕುರಿತಂತೆ ನ್ಯಾಯಾಂಗದಲ್ಲಿ ಇರುವ ಜಟಿಲತೆ ಇದ್ದು, ನಾವು ಬಿಡಿಸಲು ಹೋದರೆ ಇನ್ನಷ್ಟು ಜಟಿಲಗೊಳ್ಳುತ್ತಿದೆ. ಇಂದಲ್ಲ ನಾಳೆ ಇ- ಸ್ವತ್ತಿನ ಫಾರಂ 3 ಸಮಸ್ಯೆ ಬಗೆಹರಿಸುತ್ತೇನೆ. ಪ್ರಾಮಾಣಿಕ ಪ್ರಯತ್ನ ನಮ್ಮದಿದೆ. ಆದರೆ ಸಮಯ ತೆಗೆದುಕೊಳ್ಳುತ್ತಿದೆ ಎಂದರು.
ನಗರದ ಇತಿಹಾಸದಲ್ಲಿ ಮಹತ್ವದ ದಿನ. 55 ವರ್ಷದ ಹಿಂದೆ ಕೆಂಗ್ರೆ ನೀರನ್ನು ನಗರಕ್ಕೆ ಪೂರೈಸುವ ಯೋಜನೆ ಅನುಷ್ಠಾನಗೊಳಿಸಿದ್ದರು. ಬೆಳೆಯುತ್ತಿರುವ ಶಿರಸಿಗೆ ಹೆಚ್ಚಿನ ನೀರಿನ ಅಗತ್ಯತೆ ಇದೆ. ಇರುವ ನೀರಿನ ಮೂಲದ ಮೆಲೆಯೇ ಜಾಸ್ತಿ ಅವಲಂಬನೆ ಮಾಡಬೇಕಿದ್ದು, ಬ್ಯಾರೇಜ್ ಮಾಡಿ ನೀರು ಸಂಗ್ರಹ ಮಾಡುತ್ತಿದ್ದೇವೆ. ಈಗ 38 ಕೋಟಿ ರೂ. ಯೋಜನೆಯನ್ನು ನಾವು ಅನುಷ್ಠಾನಗೊಳಿಸಿದ್ದೇವೆ. 8.5 ಕಿ.ಮೀ. ಹೊಸ ಪೈಪ್‌ಲೈನ್ ಹಾಕಿದ್ದೇವೆ. ನಗರದಲ್ಲಿ 5 ಲಕ್ಷ ಲೀ. ಸಾಮರ್ಥ್ಯದ ಮೂರು ಹೊಸ ಟ್ಯಾಂಕ್ ಮಾಡಿದ್ದೇವೆ. 215 ಎಚ್‌ಪಿ ಎರಡು ಪಂಪ್, ಮಾರಿಗದ್ದೆಯಲ್ಲಿ 150 ಎಚ್‌ಪಿ ಎರಡು ಹೊಸ ಪಂಪ್ ಅಳವಡಿಸಿದ್ದೇವೆ ಎಂದರು.
ನಗರದ 10 ಸಾವಿರ ಮನೆಗೆ ನಲ್ಲಿ ಜೋಡಣೆ ಗುರಿ ಹೊಂದಲಾಗಿದ್ದು, ಈಗಾಗಲೇ 8 ಸಾವಿರ ಮನೆಗಳಿಗೆ ಕನೆಕ್ಷನ್ ಆಗಿದೆ. ರಾಘವೇಂದ್ರ ಮಠದ ಹಿಂದುಗಡೆಯ ಜಲಶುದ್ಧೀಕರಣ ಘಟಕಕ್ಕೆ 6 ಕೋಟಿ ರೂ. ಮಂಜೂರಿ ನೀಡಿದ್ದೇವೆ. ಆಸ್ಪತ್ರೆ ಹತ್ರ 5 ಲಕ್ಷ ಲೀಟರ್ ಸಾಮರ್ಥದ ಹೊಸ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದೇವೆ. ನಗರದ ಜನತೆಗೆ 24 ತಾಸು ನೀರು ನೀಡಲು ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರದ ಅಮೃತ ಯೋಜನೆಯಲ್ಲಿ 65 ಕೋಟಿ ರೂ. ಸಹ ಶೀಘ್ರವೇ ಮಂಜೂರಾಗಲಿದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣ, ಪೌರಾಯುಕ್ತ ಕಾಂತರಾಜು ಇತರರಿದ್ದರು.