ಹೊನ್ನಾವರ: ಭ್ರಷ್ಟ ಆಡಳಿತ ವ್ಯವಸ್ಥೆ ದೂರವಾಗಿಸಲು ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು 224 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿದ್ದು, ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಶಂಕರ್ ಗೌಡ ಇವರನ್ನು ಅಭ್ಯರ್ಥಿಯಾಗಿ ಪಕ್ಷವು ಘೋಷಿಸಿದೆ ಎಂದು ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣ್ಗೇರೆ ಹೇಳಿದರು.
ಅವರು ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರು ರಾಜಕಾರಣಿಗಳನ್ನು ರಾಜಕಾರಣವನ್ನು ಕಳಂಕಿತರು, ಅಸಹ್ಯ ಅನ್ನೋ ರೀತಿಯಲ್ಲಿ ನೋಡುವಂತಹ ಸಂದರ್ಭವಿದೆ. ಪರ್ಯಾಯ, ಪ್ರಾಮಾಣಿಕವಾದ ರಾಜಕಾರಣವನ್ನು ರಾಜ್ಯದ ಜನತೆಗೆ ನೀಡಬೇಕು ಎಂದು ರವಿಕೃಷ್ಣಾ ರೆಡ್ಡಿ ಅವರ ನೇತೃತ್ವದಲ್ಲಿ ಪಕ್ಷ ಪ್ರಾರಂಭವಾಗಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಈ ಮೂರೂ ಪಕ್ಷ ಭ್ರಷ್ಟ ಪಕ್ಷವಾಗಿದೆ. ಆದರೆ ನಮ್ಮ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಡಿ ರಾಜ್ಯದ ಜನರ ಮನೆ ಮನೆಗೆ ತಲುಪಿದೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಅದರ ಮುಖಾಂತರವು ಜನರ ತಲುಪಿದೆ. ಚುನಾವಣಾ ರಾಜಕಾರಣದಲ್ಲಿ ಸಕ್ರಿಯವಾಗಬೇಕು ಎಂದರು.
ರಾಜಕಾರಣಿಗಳು ಒಂದು ರೀತಿಯಲ್ಲಿ ಲಜ್ಜೆ, ಮಾನ ಮರ್ಯಾದೆ ಇಟ್ಟುಕೊಂಡಿರದಂತ ರಾಜಕಾರಣಿಗಳನ್ನು ನಾವು ನೋಡುತ್ತಿದ್ದೇವೆ. ಇವತ್ತಿನ ಜೆಸಿಬಿ ಪಕ್ಷಗಳು ಬಹುತೇಕವಾಗಿ ಯಾರ ಹತ್ತಿರ ಹಣ ಇದೆ, ಯಾರ ಹತ್ತಿರ ಜಾತಿ ಬಲ ಇದೆ ಅಥವಾ ಕೋಮುಬಲ ಇದೆ ಅಂಥವರಿಗೆ ಚುನಾವಣಾ ಟಿಕೆಟ್‌ಗಳನ್ನ ಕೊಟ್ಟು ಏನಾದರು ಮಾಡಿ ಚುನಾವಣೆಗಳನ್ನು ಗೆಲ್ಲಬೇಕು ಎನ್ನುವ ಏಕಮೇವ ಉದ್ದೇಶವನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಜನ ಸಾಮಾನ್ಯರು ಕೂಡ ರಾಜಕಾರಣಕ್ಕೆ ಬರಬಹುದು ಎಂದು ಇವತ್ತು ಅವರಿಗೂ ಕೆಆರ್ ಎಸ್ ಮೂಲಕ ಒಂದು ಪ್ಲಾಟ್ಫಾರ್ಮ್ ನಿರ್ಮಾಣ ಮಾಡಿದ್ದೀವಿ. ಈ ದೇಶದ ಬಗ್ಗೆ ಈ ನಾಡಿನ ಬಗ್ಗೆ ಬಗ್ಗೆ ಕಾಳಜಿ ಇರುವ, ಪ್ರಾಮಾಣಿಕತೆ, ಬದ್ಧತೆ ಇರುವ ಅಭ್ಯರ್ಥಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತಿದೆ ಎಂದರು.
ಕೆಆರ್‌ಎಸ್ ಪಕ್ಷದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಾಧ್ಯಾಪಕ ಶಂಕರ್ ಗೌಡ ಗುಣವಂತೆ ಮಾತನಾಡಿ, ಒಬ್ಬ ರಾಜಕಾರಣಿ ಆದವನಿಗೆ ಕ್ಷೇತ್ರದ ಅರಿವು ಆ ಕ್ಷೇತ್ರದ ಜನಮಾನಸದ ಸ್ಥಿತಿಗತಿಗಳು ತಿಳಿಯಲಿಲ್ಲ ಅಂದರೆ ಅವರು ಜನರ ಹತ್ತಿರ ಹೋಗಲಿಕ್ಕೆ ಸಾಧ್ಯನೇ ಇಲ್ಲ. ರಾಜಕಾರಣಕ್ಕೆ ಶಿಕ್ಷಣ ಮುಖ್ಯ ಅನಿಸುತ್ತಿದೆ. ಒಂದು ಹೃದಯ ಶ್ರೀಮಂತಿಕೆ, ಇಚ್ಛಾಶಕ್ತಿ ಇದ್ದರೆ ಜನರ ಹತ್ತಿರ ಹೋಗಬಹುದು ಅನ್ನುವಂತಹ ಬಲವಾದ ಆತ್ಮವಿಶ್ವಾಸ ನಮ್ಮ ಎದುರುಗಡೆ ಇದೆ. ನನಗೆ ಕ್ಷೇತ್ರದ ಜನರ ಪರಿಸ್ಥಿತಿ ಗೊತ್ತಿದೆ. ಈ ಕ್ಷೇತ್ರದಲ್ಲಿ ಚೆನ್ನಬೈರಾ ದೇವಿಯ ಇತಿಹಾಸ ಕಾಲದಿಂದ ಈ ಕ್ಷೇತ್ರದಲ್ಲಿ ಏನೇನೆಲ್ಲ ಆಗೋಗಿದೆ ಅನ್ನುವಂತಹ ಒಂದು ಪರಿಪೂರ್ಣ ಜ್ಞಾನವನ್ನು ನಾನು ಇಟ್ಟುಕೊಂಡಿದ್ದೇನೆ. ಕ್ಷೇತ್ರದ ಸಾಮಾಜಿಕ ಮತ್ತು ಭೌಗೋಳಿಕ ಪರಿಸರ ಅದೆಲ್ಲಕ್ಕಿಂತ ಹೆಚ್ಚು ನನಗೊಂದು ಹೃದಯ ಶ್ರೀಮಂತಿಕೆಯ ಸಂಸ್ಕಾರ ನನ್ನ ಒಳಗಡೆ ಇದೆ. ಈ ಕ್ಷೇತ್ರದ ರಾಜಕಾರಣಿಗಳ ಬಗ್ಗೆ ನಾನು ಮಾತನಾಡಲಿಕ್ಕೆ ಹೋಗುವುದಿಲ್ಲ. ಯಾಕೆಂದರೆ ರಾಜಕಾರಣಕ್ಕೆ ಸಂಬಂಧಪಟ್ಟ ಹಾಗೆ ಅವರು ಇಲ್ಲವೆ ಇಲ್ಲ. ಅದಕ್ಕೆ ತದ್ವಿರುದ್ದವಾಗಿದೆ. ಕ್ಷೇತ್ರದ ರಾಜಕಾರಣ ಅರಿಯಲು ಜನಸಾಮಾನ್ಯರ ಬಳಿ ಹೋಗಬೇಕು. ಸರ್ಕಾರಿ ಕಚೇರಿಗಳಿಗೆ ತೆರಳಬೇಕು. ಆಗ ಇಲಿನ ಕಷ್ಟನಷ್ಟ ಅರಿವಿಗೆ ಬರುತ್ತದೆ ಎಂದರು.ಮುಂದಿನ ಬದಲಾವಣೆ ಯೋಗ್ಯತೆ ಆಧಾರಿತ ಬದಲಾವಣೆ ಆಗಬೇಕು.ಈ ನಿಟ್ಟಿನಲ್ಲಿ ಜನತೆ ನನಗೆ ಒಂದು ಅವಕಾಶ ನೀಡಬಹುದೆಂಬ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ತಾಲೂಕಾಧ್ಯಕ್ಷ ನೀಲಕಂಠ ನಾಯ್ಕ, ಉಪಾಧ್ಯಕ್ಷ ಸಂದೀಪ ನಾಯ್ಕ, ರಜನಿ, ನಿತ್ಯಾನಂದ ಅಳ್ವೇಕರ್, ವಿನಾಯಕ ಮತ್ತಿತರಿದ್ದರು.