ಶಿರಸಿ: 89 ವರ್ಷಗಳ ನಂತರ ಬೆಟ್ಟದ ಗಾಳಿಚೀಲಗಪ್ಪೆ ಗೊದಮೊಟ್ಟೆಯ ಮರು ಅನ್ವೇಷಣೆ ಸಂಶೋಧನಾ ಕಾರ್ಯ ನಡೆದಿದೆ.
ಜೀವವೈವಿಧ್ಯ ಸಂಶೋಧಕ, ತಾಲೂಕಿನ ವರ್ಗಾಸರದ ಅಮಿತ ಹೆಗಡೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವಸಂವಹನ ಪ್ರಯೋಗಾಲಯದ ಪ್ರೊ.ಗಿರೀಶ ಕಾಡದೇವರು, ಪ್ರಾಣಿಶಾಸ್ತ್ರ ವಿಭಾಗದ ಹಾಗೂ ಪುಣೆಯ ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿ ಕೆ.ಪಿ.ದಿನೇಶರವರ ಸಹಯೋಗದಲ್ಲಿ ಈ ಬೆಟ್ಟದ ಗಾಳಿಚೀಲಗಪ್ಪೆಯ ಗೊದಮೊಟ್ಟೆಯನ್ನು ಮರುಶೋಧಿಸಿದ್ದಾರೆ.
1934ರಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಪಾರ್ಕರ್ ಅವರ ಸಣ್ಣ ವಿವರಣೆಯ ನಂತರ, ಇದು ಸುಮಾರು 89 ವರ್ಷಗಳ ನಂತರ ಈ ಪ್ರಭೇದದ ಗೊದಮೊಟ್ಟೆಗಳ ಮೇಲಿನ ಸಂಶೋಧನಾತ್ಮಕ ವರದಿಯಾಗಿದೆ. ಈ ಕಪ್ಪೆಯು ಪಶ್ಚಿಮ ಘಟ್ಟದ ಕರ್ನಾಟಕ ಭಾಗದ ಪುಷ್ಪಗಿರಿ ಪರ್ವತ ಶ್ರೇಣಿಯಿಂದ ತಮಿಳುನಾಡು ಭಾಗದ ತಿರುನಲ್ವೇಲಿಯ ಮುರುಂಗಾ ಮೊಟ್ಟೈ ಅರಣ್ಯಭರಿತ ಪರ್ವತ ಶ್ರೇಣಿಗಳವರೆಗೆ (ಸಮುದ್ರಮಟ್ಟದಿಂದ 800-1916ಮೀಟರ್) ಇರುವುವಿಕೆಯನ್ನು ಗುರುತಿಸಲಾಗಿದೆ. ಇದರಲ್ಲಿ ಈ ಕಪ್ಪೆಯು, ಪಶ್ಚಿಮ ಘಟ್ಟದಿಂದ ಉತ್ತರದ ವ್ಯಾಪ್ತಿಯ ಹಾಗೂ ಸಮುದ್ರಮಟ್ಟದಿಂದ ಎತ್ತರದ ಹೊಸ ಪರಿಧಿಗಳ ದಾಖಲೆಗಳನ್ನು ಒಳಗೊಂಡಿದೆ. ಹೊಸ ಶ್ರೇಣಿಯ ಆಧಾರದ ಮೇಲೆ ಪ್ರಭೇದದ ಐಯುಸಿಎನ್ ಸಂರಕ್ಷಣಾ ಸ್ಥಿತಿಯ ಬಗ್ಗೆಯೂ ಚರ್ಚಿಸಲಾಗಿದೆ.
ಈ ಮೊದಲು ಬೆಟ್ಟದ ಗಾಳಿಚೀಲಗಪ್ಪೆಯು ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕವಾಗಿ ಹರಡಿದೆ ಎಂದು ದಾಖಲಾಗಿತ್ತು. ಆದರೆ ದಾಖಲಿತ ಶ್ರೇಣಿಗಳಲ್ಲಿ ಈ ಪ್ರಭೇದವನ್ನು ನೋಡಲು ಸಾಧ್ಯವಾಗುತ್ತಿಲ್ಲ, ಬಹುಶಃ ಇದೇ ಕುಲದ ಕಪ್ಪೆಗಳು ನೋಡಲು ಒಂದೇ ರೀತಿ ಕಾಣಿಸುವದರಿಂದ ತಪ್ಪಾಗಿ ಗುರುತಿಸಿರಬಹುದು. ಪ್ರಸ್ತುತ ಸಂಶೋಧನಾ ಅಧ್ಯಯನದ ಪ್ರಕಾರ ಈ ಕಪ್ಪೆಯು ಪಶ್ಚಿಮ ಘಟ್ಟದ ಅರಣ್ಯಭರಿತ ಪರ್ವತ ಶ್ರೇಣಿಗಳಿಗೆ (ಸಮುದ್ರಮಟ್ಟದಿಂದ 800-1916ಮೀಟರ್) ಮಾತ್ರ ಸ್ಥಳೀಯವಾಗಿದೆ ಎಂದು ಅಭಿಪ್ರಾಯಿಸಲಾಗಿದೆ. ಈ ಸಂಶೋಧನೆಯು ಪ್ರತಿಷ್ಠಿತ ‘ಜರ್ನಲ್ ಆಫ್ ಥ್ರೆಟೆನ್ಡ್ ಟ್ಯಾಕ್ಸಾನಲ್ಲಿ’ ಕನ್ನಡ ಸಾರಾಂಶದೊಂದಿಗೆ ಪ್ರಕಟಗೊಂಡಿದೆ.