ಸಿದ್ದಾಪುರ: ಬೇಡ್ಕಣಿಯ ಶ್ರೀಮಾರುತಿ ಪ್ರಸಾದಿತ ಯಕ್ಷಗಾನ ಕಲಾ ಸಂಘ (ರಿ) ಇಪ್ಪತೈದು ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾ.5 ರಂದು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಸಹಕಾರದೊಂದಿಗೆ ಬೇಡ್ಕಣಿಯ ಶ್ರೀಕೋಟೆ ಆಂಜನೆಯ ಕಲಾ ಮಂದಿರದಲ್ಲಿ 25ರ ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿರುವ 25 ಮಹನೀಯರನ್ನು ಸನ್ಮಾನಿಸಲಾಗುವುದು ಎಂದು ಕಲಾ ಸಂಘದ ಅಧ್ಯಕ್ಷ ಲಕ್ಷ್ಮಣ ಜಿ.ನಾಯ್ಕ ಬೇಡ್ಕಣಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಯಕ್ಷಗಾನ ಮೇಳಕ್ಕೆ ಈಗ 75 ವರ್ಷಗಳ ಇತಿಹಾಸ ಇದೆ. ಇದರಿಂದೆ ಅನೇಕ ಕಲಾವಿದರು ಬೆಳೆದಿದ್ದಾರೆ. ಈ ಹಿಂದೆ ಹಿರಿಯರು ಪ್ರಾರಂಭಿಸಿದ ಮೇಳವನ್ನು ಯಕ್ಷಗಾನ ಕಲಾವಿದರಾದ ಕೃಷ್ಣ ಜಿ.ಬೇಡ್ಕಣಿಯವರು 25 ವರ್ಷಗಳ ಹಿಂದೆ ಪುನಃ ಆರಂಭಿಸಿ ನಡೆಸಿಕೊಂಡು ಬಂದಿದ್ದರು. ಆದರೆ ಅವರು ವೃತ್ತಿ ಮೇಳಗಳತ್ತ ಮುಖಮಾಡಿದಾಗ ನಾನು ನಡೆಸಿಕೊಂಡು ಬರುತ್ತಿದ್ದೇನೆ.ಹಲವು ಕಷ್ಟಗಳ ನಡುವೆಯೂ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಯಕ್ಷಾಭಿಮಾನಿಗಳು, ಸಹೃದಯಿಗಳು ಈ ಕಾರ್ಯಕ್ರಮಕ್ಕೆ ಬಂದು ತನು-ಮನ-ಧನದ ಸಂಹಕಾರವನ್ನು ನೀಡಿ ಪ್ರತೋತ್ಸಾಹಿಸಬೇಕು ಎಂದು ವಿನಂತಿಸಿಕೊಂಡರು.
ಮಾ.5ರಂದು ಮಧ್ಯಾಹ್ನ 3 ಗಂಟೆಗೆ 25ರ ಯಕ್ಷ ಸಂಭ್ರಮ ಕಾರ್ಯಕ್ರಮದ ಉದ್ಘಾಟನಾ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬನವಾಸಿ ಸ.ಪ.ಪೂ ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಅಭಿನಂದನಾ ನುಡಿ ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಗರ ಶಾಸಕ ಹರತಾಳು ಹಾಲಪ್ಪ, ಎಚ್.ಎಂ. ವೀರರಾಜಯ್ಯ ಜೈನ್, ಗೋಪಾಲಕೃಷ್ಣ ಬೇಳೂರು, ಭೀಮಣ್ಣ ನಾಯ್ಕ, ಉಪೇಂದ್ರ ಪೈ, ಡಾ. ಕೆ.ಶ್ರೀಧರ ವೈದ್ಯ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಇದೆ ಸಂದರ್ಭದಲ್ಲಿ ಯಕ್ಷಗಾನ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿರುವ 25 ಮಹನಿಯರನ್ನು ಸನ್ಮಾನಿಸಲಾಗುವುದು . 75 ಮಹನಿಯರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು ಎಂದರು.
ಶ್ರೀಕೋಟೆ ಹನುಮಂತ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಮಾತನಾಡಿ, ಈ ಯಕ್ಷಗಾನ ಕಲಾ ಸಂಘ ಈ ಹಿಂದೆ ಅನೇಕ ಹಿರಿಯರಿಂದ ಸ್ಥಾಪಿತವಾದ ಬೇಡ್ಕಣಿ ಮೇಳವಾಗಿತ್ತು. ಅದು ದೇವಾಲಯದ ಆಶ್ರಯದೊಂದಿಗೆ ಆ ಹೆಸರಿನಲ್ಲಿ ಹುಟ್ಟಿಕೊಂಡಿತ್ತು. ಬಹಳ ವರ್ಷಗಳ ಕಾಲ ಇದು ತನ್ನ ಕಲಾ ಸೇವೆಯನ್ನು ಸಿದ್ದಾಪುರ- ಸಾಗರ ಮತ್ತು ಸೊರಬ ತಾಲೂಕಿನ ಸುತ್ತಮುತ್ತು ನೀಡಿವೆ. ಇಲ್ಲಿ ಎಲ್ಲಿಯೇ ಯಾವುದೆ ಜಾತ್ರೆ, ಉತ್ಸವಗಳು ನಡೆದರೂ ಬೇಡ್ಕಣಿ ಮೇಳದ ಯಕ್ಷಗಾನ ಇರುತ್ತಿತ್ತು.ಅದು ಇಂದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ಈ ಕಾರ್ಯಕ್ರಮದ ಮೂಲಕ ಆ ಎಲ್ಲಾ ಹಿರಿಯರನ್ನು ನೆನಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪರಶುರಾಮ ನಾಯ್ಕ, ಚಂದ್ರಶೇಖರ ನಾಯ್ಕ ಕುಬ್ರಿಗದ್ದೆ, ನಾರಾಯಣ ನಾಯ್ಕ, ಮಂಜುನಾಥ ಮಡಿವಾಳ ಉಪಸ್ಥಿತರಿದ್ದರು.