ಶಿರಸಿ: ಕನ್ನಡ ರಾಜ್ಯವನ್ನು ಆಳಿದ ರಾಜ್ಯ ಮನೆತನಗಳಾದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ಘತವೈಭವನ್ನು ಸಾರುವ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಲಾಗಿದ್ದು, ಐತಿಹಾಸಿಕ ವಿಶೇಷ ಕಾರಿಡಾರ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಪಂಪನ ಆಶಯದಂತೆ ಈ ಭಾಗದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬನವಾಸಿ ಪಟ್ಟಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕದಂಬೋತ್ಸವ- 2023 ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಬನವಾಸಿಯು ಆದಿಕವಿ ಪಂಪ ಜನಿಸಿದ ನಾಡು ಕನ್ನಡ ನಾಡಿಗೆ ಮುನ್ನುಡಿ ನೀಡಿದ ನಾಡಾಗಿದೆ. ಕದಂಬೋತ್ಸವನ್ನು ವಿಜೃಂಭಣೆಯಿಂದ ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ 3 ಸಾಹಿತಿಗಳಿಗೆ ಪಂಪ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಬನವಾಸಿಯು ಸಾಹಿತ್ಯ, ಕಲೆಗೆ ಹೆಸರುವಾಸಿಯಾಗಿದೆ ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, 70 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿಗಳು ಈ ವರ್ಷದ ಕದಂಬೋತ್ಸವ ಕಾರ್ಯಕ್ರಮಕ್ಕೆ 3 ಕೋಟಿ ನೀಡಿದ್ದಾರೆ ಎಂದರು.
ಬನವಾಸಿ ಇಲ್ಲಿಯ ಐತಿಹಾಸಿಕ ಶ್ರೀಮಧುಕೇಶ್ವರ ದೇವರ ನೂತನವಾಗಿ ನಿರ್ಮಾಣಗೊಂಡ ಶ್ರೀಮಧುಕೇಶ್ವರ ದೇವರ ಮಹಾಸ್ಯಂದನ ರಥವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳವಾರ ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮೂವರು ಸಾಹಿತಿಗಳಿಗೆ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 2020- 21ನೇ ಸಾಲಿನ ಪ್ರಶಸ್ತಿಗೆ ಪ್ರೊ.ಸಿ.ಪಿ. ಕೃಷ್ಣಕುಮಾರ್ ಮೈಸೂರು, 20221-22ರ ಸಾಲಿನಲ್ಲಿ ಡಾ.ಬಾಬು ಕೃಷ್ಣಮೂರ್ತಿ ಬೆಂಗಳೂರು ಹಾಗೂ 2022- 23ನೇ ಸಾಲಿನ ಪಂಪ ಪ್ರಶಸ್ತಿಗೆ ಎಸ್.ಆರ್.ರಾಮಸ್ವಾಮಿ ಬೆಂಗಳೂರು ಇವರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಮಾತನಾಡಿ, ಪಂಪ ಪ್ರಶಸ್ತಿ ಲಭಿಸಿದ್ದು ಅತೀ ಸಂತೋಷ ಉಂಟುಮಾಡಿದೆ. ಈ ಪಂಪ ಪ್ರಶಸ್ತಿಯು ನನಗೆ ಅನಿರೀಕ್ಷಿತ ಎಂದರು. ನೂರಾರು ಸಾಹಿತಿಗಳು ಇಂದಿಗೂ ಕವಿತೆ ಸಾಹಿತ್ಯ ಬರೆಯುತ್ತಿದ್ದು, ನಾನು ಕೂಡ ಸಾಹಿತ್ಯವನ್ನು ಬರೆಯಲು ಆರಂಭಿಸಿದೆ. ಅದು ನಮ್ಮ ಮನೆಯಲ್ಲಿ ನಮ್ಮ ಪರಿವಾದವರು ಸದಾ ಈ ಬರವಣಿಗೆಯಲ್ಲಿ ತೊಡಗಿಕೊಂಡಿರುವುದರಿಂದ ನನಗೂ ಕೂಡ ಈ ಸಾಹಿತ್ಯವನ್ನು ಬರೆಯುವ ಹವ್ಯಾಸ ಮೂಡಿತು. ಸಾಹಿತ್ಯವು ಸ್ವಾಭಿಮಾನವನ್ನು ಮೂಡಿಸುತ್ತದೆ. ಇತಿಹಾಸವನ್ನು ತಿಳಿಪಡಿಸುವ ಶಕ್ತಿ ಹೊಂದಿದೆ. ದೇಶವನ್ನು ಕಟ್ಟುವಂತ ಶಕ್ತಿ ಮೂಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಮ ಸಿದ್ದಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಖಂಡೂ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.