Slide
Slide
Slide
previous arrow
next arrow

ಲೆಕ್ಕಪತ್ರ, ವ್ಯವಹಾರಗಳ ಬಗ್ಗೆ ಆಡಳಿತ ಮಂಡಳಿಯ ಗಮನವಿರಲಿ: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳ ಸಮಾಲೋಚನ ಸಭೆಯು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅಧ್ಯಕ್ಷತೆಯಲ್ಲಿ ಶಿರಸಿಯ ಟಿ.ಎಂ.ಎಸ್. ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕಳೆದ 4 ವರ್ಷಗಳಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಹಾಗೂ ಶಿರಸಿ ತಾಲೂಕಿನಾದ್ಯಂತ ಕೈಗೊಂಡ ಕೆಲಸ ಕಾರ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಜಿಲ್ಲೆಯಲ್ಲಿ ಒಟ್ಟೂ 47 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಿದ್ದು, ಜಿಲ್ಲೆಯಾದ್ಯಂತ ಉಳಿದ ಎಲ್ಲಾ ಹಾಲು ಸಂಘಗಳಿಗೆ ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಸ್ವಂತ ಕಟ್ಟಡ ಹೊಂದುವಂತೆ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಗೌರವ ಧನ ನಿಗಧಿಪಡಿಸುವ ಕುರಿತು ಕರ್ನಾಟಕ ಹಾಲು ಮಹಾ ಮಂಡಳದೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯಾದ್ಯಂತ ನೂತನವಾಗಿ ಪ್ರಾರಂಭವಾಗುವ ಹಾಲು ಉತ್ಪಾದಕರ ಸಂಘಗಳಿಗೆ ಆರಂಭಿಕ ಉಪಕರಣ ಖರೀದಿಸಲು ತಲಾ ರೂ. 25,000/- ಗಳನ್ನು ಒಕ್ಕೂಟದಿಂದ ನೀಡಲಾಗುತ್ತಿದೆ. ಶಿರಸಿ ತಾಲೂಕಿನಲ್ಲಿ ಸಪ್ಟೆಂಬರ್‌ 2019 ರಿಂದ ಇಲ್ಲಿಯ ತನಕ ದುರದೃಷ್ಟವಶಾತ್‌ ಹಾಲು ಪೂರೈಸುವ ಕಲ್ಯಾಣ ಸಂಘದ ಒಟ್ಟೂ 28 ಸದಸ್ಯರು ಸ್ವಾಭಾವಿಕ ಮರಣ ಹೊಂದಿದ್ದು, ಅವರ ವಾರಸುದಾರರಿಗೆ ತಲಾ ರೂ. 10,000/- ರಂತೆ ರೂ. 2,80,000/- ಗಳಷ್ಟು ಮೊತ್ತದ ಚೆಕ್‌ಗಳನ್ನು ವಿತರಿಸಲಾಗಿದೆ. ಹಾಗೂ ಹಾಲು ಪೂರೈಸುವ ಕಲ್ಯಾಣ ಸಂಘದ ಒಟ್ಟೂ 3 ಸದಸ್ಯರು ಅಪಘಾತದಿಂದ ದುರ್ಮರಣ ಹೊಂದಿದ್ದು, ಅವರ ವಾರಸುದಾರರಿಗೆ ತಲಾ ರೂ. 25,000/- ರಂತೆ ರೂ. 75,000/- ಗಳಷ್ಟು ಮೊತ್ತದ ಚೆಕ್‌ಗಳನ್ನು ವಿತರಿಸಲಾಗಿದ್ದು, ಹಾಗೂ ಶಿರಸಿ ತಾಲೂಕಿನಲ್ಲಿ ಸಪ್ಟೆಂಬರ್‌ 2019 ರಿಂದ ಇಲ್ಲಿಯ ತನಕ ಹಾಲು ಪೂರೈಸುವ ಕಲ್ಯಾಣ ಸಂಘದ ಒಟ್ಟೂ 29 ಸದಸ್ಯರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅಂತವರಿಗೆ ತಲಾ ರೂ. 5,000/- ರಂತೆ ರೂ. 1,45,000/- ಮೊತ್ತದ ಚೆಕ್‌ಗಳನ್ನು ವಿತರಿಸಲಾಗಿದೆ ಎಂದರು.

ಈಗಾಗಲೇ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಅನುದಾನದ ಅಡಿಯಲ್ಲಿ ವಿತರಿಸಲು ರಬ್ಬರ್ ಮ್ಯಾಟ್‌ಗಳನ್ನು ಹುಲ್ಲು ಕತ್ತರಿಸುವ ಯಂತ್ರಗಳನ್ನು ತರಸಿಲಾಗಿದ್ದು, ಅದನ್ನು ಸಂಘಕ್ಕೆ ನೇರವಾಗಿ ವಿತರಿಸಲಾಗಿದೆ. ಹಾಗೂ ಶೀಘ್ರದಲ್ಲಿ ಅರ್ಹ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಎ.ಎಂ.ಸಿ.ಯು ಗಳನ್ನು ಸಹ ಅನುದಾನದ ಅಡಿಯಲ್ಲಿ ವಿತರಿಸಲಾಗುವುದು. ಈಗಿನ ದಿನಗಳಲ್ಲಿ ಅತೀ ಹೆಚ್ಚು ರಾಸುಗಳು ಚರ್ಮಗಂಟು ರೋಗದಿಂದ ಮರಣವನ್ನು ಹೊಂದುತ್ತಿದ್ದು, ಅದರಲ್ಲೂ ಆರೋಗ್ಯವಂತ ರಾಸುಗಳು ಕೂಡ ಅಕಾಲಿಕ ಮರಣ ಹೊಂದುತ್ತಿದ್ದು, ಯಾವುದೇ ರಾಸುಗಳು ಮರಣ ಹೊಂದಿದ ಕೂಡಲೇ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ರಾಸುವಿನ ಮರಣೋತ್ತರ ಪರೀಕ್ಷೆ ಮಾಡಿಕೊಳ್ಳಬೇಕೆಂದರು. ಅದಕ್ಕಾಗಿ ಹಾಲು ಉತ್ಪಾದಕರ ರೈತರು ಪ್ರತೀ ವರ್ಷ ರಾಸು ವಿಮೆಯನ್ನು ಕಡ್ಡಾಯವಾಗಿ ಮಾಡಿಸಿ ಕಾಲಕಾಲಕ್ಕೆ ಅದನ್ನು ನವೀಕರಿಸಿಕೊಳ್ಳಬೇಕೆಂದು ವಿನಂತಿಸಿದರು.
ಜಿಲ್ಲೆಯಲ್ಲಿ ಹಾಲು ಸಂಘಗಳಲ್ಲಿ ವಿದ್ಯುತ್‌ ಸಮಸ್ಯೆ ಇರುವ ಕಾರಣ ಸೌರ ಚಾಲಿತ ಹಾಲು ಕರೆಯುವ ಯಂತ್ರ ನೀಡುವ ಕುರಿತು ಆಡಳಿತ ಮಂಡಳಿಯಲ್ಲಿ ಚರ್ಚಿಸಲಾಗಿದೆ. ಹಾಲು ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ತಪ್ಪದೇ ಪ್ರತೀ ತಿಂಗಳು ಸಭೆ ಸೇರಿ ಸಂಘದ ಹಾಲು ಖರೀದಿ ತೂಕ, ಸ್ಥಳೀಯ ಹಾಲು ಮಾರಾಟ, ಪಶು ಆಹಾರ ಖರೀದಿ, ಲೆಕ್ಕಪತ್ರ, ವ್ಯವಹಾರಗಳ ಕುರಿತು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲು ಕರೆ ನೀಡಿದರು. ಹಾಗೂ ಸಮಯಕ್ಕೆ ಸರಿಯಾಗಿ ಲೆಕ್ಕಪರಿಶೋಧನೆ ಮಾಡಿಸಿ ವಾರ್ಷಿಕ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ತಿಳಿಸಿದರು. ಅನೇಕ ಸಂಘಗಳಲ್ಲಿ ನಗದು ಪುಸ್ತಕಗಳನ್ನು ಪ್ರತೀ ದಿನ ಬರೆಯದೇ ಇರುವುದು ಕಂಡು ಬಂದಿದ್ದು, ಅದಕ್ಕಾಗಿ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ತಮ್ಮ ಸಂಘದ ಕಾರ್ಯದರ್ಶಿಯ ಬಳಿ ಲೆಕ್ಕಪತ್ರ, ಸಂಘದ ವ್ಯವಹಾರಗಳಿಗೆ ಸಂಬಂಧಿಸಿದ ಪುಸ್ತಕಗಳಲ್ಲಿ ಮಾಹಿತಿಯನ್ನು ಪ್ರತೀ ದಿನ ನಮೂದಿಸಲು ಸೂಚಿಸಬೇಕು, ಶಿರಸಿ ತಾಲೂಕಿನ ಎಲ್ಲಾ ಹಾಲು ಸಂಘಗಳು ಉತ್ಪಾದಕರು ತರುವ ಹಾಲಿಗೆ ಪ್ಯಾಟ್‌ ಆಧಾರಿತ ದರವನ್ನು ಕಡ್ಡಾಯವಾಗಿ ನೀಡಿ ರೈತರಿಗೆ ಉತ್ತೇಜನ ನೀಡಬೇಕು. ಈಡೀ ರಾಜ್ಯದಲ್ಲಿ ಹಾಲಿನ ಇಳುವರಿ ಕಡಿಮೆಯಾಗಿದ್ದರೂ ಸಹ ನಮ್ಮ ಶಿರಸಿ ತಾಲೂಕಿನ ಹಾಲು ಶೇಖರಣೆಯಲ್ಲಿ ರಾಜ್ಯಕ್ಕೆ ಹೋಲಿಸಿದರೆ ಅಂತಹ ಬದಲಾವಣೆ ಕಂಡುಬಾರದೇ ಇರುವುದು ಸಂತೋಷ ತಂದಿದೆ. ಶಿರಸಿ ತಾಲೂಕಿನ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆಯು ಪ್ರಸ್ತುತವಾಗಿ ಸಮ ಸ್ಥಿತಿಯಲ್ಲಿದ್ದು, ಸಂಘಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿ ತಮ್ಮ ಸಂಘಗಳಲ್ಲಿ ಹೈನುಗಾರಿಕೆಯಲ್ಲಿ ಇನ್ನೂ ಹೆಚ್ಚಿನ ಜನ ತೊಡಗಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಹಾಗೂ ಜಿಲ್ಲೆಯಲ್ಲಿ ನಂದಿನಿ ಹಾಲಿನ ಬೇಡಿಕೆ ಈ ಹಿಂದೆಂದಿಗಿಂತಲೂ ಹೆಚ್ಚಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹಾಲಿನ ಶೇಖರಣೆ ಹೆಚ್ಚಾಗುವಲ್ಲಿ ಸಹಕರಿಸಬೇಕು, ಹೈನೋದ್ಯಮದಲ್ಲಿ ಆಸಕ್ತಿ ಇರುವಂತವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ನನ್ನಿಂದ ಸಾಧ್ಯವಾಗುವ ಸಹಾಯ ಸೌಲಭ್ಯಗಳನ್ನು ಮಾಡಲು ನನಾ ಸದಾ ಸಿದ್ಧ ಎಂದರು. ಸಂಘಗಳಲ್ಲಿ ಹಾಲು ಉತ್ಪಾದಕರು ನಂದಿನಿ ಪಶು ಆಹಾರ ಮತ್ತು ಖನಿಜ ಮಿಶ್ರಣಗಳನ್ನು ಬಳಸುವಂತಾಗಬೇಕು, ಹಾಲು ಉತ್ಪಾದಕರು ಸ್ಟೀಲ್‌ ಕ್ಯಾನ್‌ಗಳಲ್ಲಿಯೇ ಕಡ್ಡಾಯವಾಗಿ ಹಾಲು ತರುವಂತೆ ಸಂಘಗಳು ನೋಡಿಕೊಳ್ಳಬೇಕು, ಸಂಘಗಳಲ್ಲಿ ಫುಡ್‌ ಲೈಸೆನ್ಸ್‌ ಕಡ್ಡಾಯವಾಗಿರಬೇಕು, ಸಂಘಗಳಲ್ಲಿನ ಮಿಲ್ಕ್‌ ಅನಲೈಸರ್‌ ಹಾಗೂ ಮಿಲ್ಕೋ ಟೆಸ್ಟರ್‌ ಗಳನ್ನು ಕಡ್ಡಾಯವಾಗಿ ಬಳಸಿ ಹಾಲಿನ ಗುಣಮಟ್ಟದ ಬಗ್ಗೆ ಸದಾ ಕಾಳಜಿವಹಿಸಬೇಕು, ಸಂಘದ ಎಲ್ಲಾ ಹಾಲು ಉತ್ಪಾದಕ ಸದಸ್ಯರು ಒಕ್ಕೂಟದ ಕಲ್ಯಾಣ ಸಂಘದ ಸದಸ್ಯತ್ವ ಪಡೆಯುವಂತಾಗಬೇಕು ಎಂದರು. ಯಾವುದೇ ಸಮಯದಲ್ಲಾದರೂ ಕೂಡ ತಾವುಗಳು ದೂರವಾಣಿ ಮುಖಾಂತರ ನನ್ನನ್ನು ಸಂಪರ್ಕಿಸಬಹುದಾಗಿದ್ದು, ತಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಹೈನೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಒಕ್ಕೂಟದ ಮಾನ್ಯ ಅಧ್ಯಕ್ಷರಾದ ಶಂಕರ ವೀರಪ್ಪ ಮುಗದ ರವರು ಅತೀವ ಕಾಳಜಿ ಹೊಂದಿದ್ದು, ಅವರ ಜೊತೆ ಜಿಲ್ಲೆಯ ಮೂರು ಜನ ನಿರ್ದೇಶಕರುಗಳು ಕೈಜೋಡಿಸಿ ಸಂಘಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಹಾಲು ಉತ್ಪಾದನೆಯನ್ನು ಹಾಗೂ ಹಾಲಿನ ಮಾರಾಟವನ್ನು ಹೆಚ್ಚಿಸುವತ್ತ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ಶಿರಸಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಟಿ.ವಿ. ಶ್ರೀನಿವಾಸ ಅವರು ಉಪಸ್ಥಿತರಿದ್ದು ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಕೂಡಲೇ ತಮ್ಮ ಲೆಕ್ಕಪರಿಶೋಧನೆಯ ಮಾಹಿತಿಯನ್ನು ಹಾಗೂ ಚುನಾವಣೆಗೆ ಅರ್ಹರಾದ ಸಂಘಗಳು ತಮ್ಮ ಚುನಾವಣೆಗೆ ಸಂಬಂಧಿಸಿದ ಯಾದಿಗಳನ್ನು ಸಿದ್ಧಪಡಿಸಿ ಶೀಘ್ರದಲ್ಲಿಯೇ ವರದಿಯನ್ನು ಸಹಾಯಕ ನಿಬಂಧಕರ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು. ಸಹಕಾರ ಸಂಘಗಳ ಕಾಯ್ದೆ ಮತ್ತು ಆಡಳಿತ ಮಂಡಳಿಯ ಜವಾಬ್ದಾರಿಗಳ ಕುರಿತು ಸಭೆಗೆ ಮಾಹಿತಿ ನೀಡಿ ಸಭೆಗೆ ಆಗಮಿಸಿದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳ ಪ್ರಶ್ನೆ ಹಾಗೂ ಸಂದೇಹಗಳಿಗೆ ಸೂಕ್ತ ಮಾಹಿತಿ ಒದಗಿಸಿದರು. ನಬಾರ್ಡ ಅಧಿಕಾರಿಗಳಾದ ಆರ್‌ ರೇಜಸ್‌ ಅವರು ಮಾತನಾಡಿ ನಬಾರ್ಡನಿಂದ ಸಿಗಬಹುದಾದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್‌ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಹಾಯಕ ವ್ಯವಸ್ಥಾಪಕರಾದ ಡಾ. ವಿವೇಕ್‌ ಎಸ್‌ ಆರ್‌, ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ಶಿರಸಿ ಉಪ ವಿಭಾಗದ ಗುರುದರ್ಶನ ಭಟ್‌, ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಶಿರಸಿ ತಾಲೂಕಿನ ಹಾಲು ಸಂಘಗಳ ಅಧ್ಯಕ್ಷರುಗಳು, ಮುಖ್ಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top