ಅಂಕೋಲಾ: ಹೊನ್ನೆಬೈಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ 15 ಲಕ್ಷ ರೂ. ವೆಚ್ಚದ 3 ಕಾಲುಸಂಕ ಮಂಜೂರಿಯಾಗಿದ್ದು, ಅದರಲ್ಲಿ 1 ಕಾಲುಸಂಕ ಹೊನ್ನೆಬೈಲ್ ಗ್ರಾಮದ ಲಕ್ಷ್ಮಣ ಗೌಡ ಹಾಗೂ ಕುವರ ನಾಯ್ಕ ಅವರ ಮನೆಯ ಹತ್ತಿರ ಇರುವ ಗಟಾರಗೆ ಹಾಕಿ ಹಣದ ದುರ್ಬಳಕೆಯಾಗುತ್ತಿರುವುದರಿಂದ ವಿರೋಧ ವ್ಯಕ್ತವಾಯಿತು.
ಬಸವರಾಜ ದೊಡ್ಮನಿ ಎನ್ನುವ ಗುತ್ತಿಗೆದಾರನಿಗೆ ಟೆಂಡರ್ ಆಗಿದ್ದು, ಆತ ತಾವು ಸ್ಥಳಕ್ಕೆ ಬಂದು ಕಾಮಗಾರಿ ಮಾಡದೆ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಉಪ ಗುತ್ತಿಗೆಯನ್ನು ನೀಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ಹೊನ್ನೆಬೈಲ್ ಗ್ರಾಮ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬಳಿ ಚರ್ಚಿಸಿದಾಗ ಇದು ಕಾಲುಸಂಕವಾಗಿದ್ದು, ಇದನ್ನು ಬದಲಿಸಿ ಗಟಾರವನ್ನು ನಿರ್ಮಿಸಿ ಅದರ ಪೂರ್ಣ ಮೇಲ್ಭಾಗ ಕಾಂಕ್ರಿಟೀಕಣ ಮಾಡಲು ಮುಂದಾದ ವಿಷಯದ ತಿಳಿದುಬಂದ ಹಿನ್ನೆಲೆಯಲ್ಲಿ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ಕಾಲು ಸಂಕಕ್ಕಾಗಿ ಬಂದ ಈ ಯೋಜನೆಯನ್ನು ತಿರುಚಿ ಚರಂಡಿ ನಿರ್ಮಿಸುತ್ತಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಇನ್ನು ಒಂದು ಕಾಮಗಾರಿಯನ್ನು ತಮ್ಮ ಲಾಭಕ್ಕಾಗಿ ಯಾವ ರೀತಿ ಬೇಕಾದರೂ ಬದಲಾವಣೆ ಮಾಡುತ್ತಾರೆ ಎನ್ನುವುದು ಇದರಿಂದ ತಿಳಿಯುವಂತಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕಾಂತ ಕೋಳೆಕರ, ಗ್ರಾ.ಪಂ. ಅಧ್ಯಕ್ಷ ಮಾದೇವ ಗುನಗಾ, ಪಿ.ಡಿ.ಓ. ಹಸ್ಮತ್ ಖಾನ್, ಕಾರ್ಯದರ್ಶಿ ಗಣಪತಿ ನಾಯ್ಕ, ಸದಸ್ಯ ವೆಂಕಟರಮಣ ನಾಯ್ಕ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರಾದ ಲಕ್ಷ್ಮಣ ಗೌಡ, ಕುವರ ನಾಯ್ಕ ಮಾತನಾಡಿ, ಗಟಾರ ನಿರ್ಮಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಮೇಲ್ಭಾಗವನ್ನು ಸಂಪೂರ್ಣವಾಗಿ ಕಾಂಕ್ರಿಟೀಕರಣ ಮಾಡಲು ನಾವು ಬಿಡುವುದಿಲ್ಲ. ಅಷ್ಟಕ್ಕೂ ಅಗತ್ಯವಿದ್ದರೆ ಸಿದ್ದಪಡಿಸಿದ ಮುಚ್ಚಳಿಕೆಯನ್ನು ಅಳವಡಿಸಲಿ ಎಂದರು.
ಯೋಜನೆಯನ್ನೇ ತಿರುಚಿದ ಗುತ್ತಿಗೆದಾರ: ಗ್ರಾಮಸ್ಥರ ಅಸಮಾಧಾನ
