ಕಾರವಾರ: ರಾಜ್ಯ ರಾಜಧಾನಿಯಲ್ಲಿ ಫೆ.13ರಿಂದ 17ರವರೆಗೆ ಲೋಹದ ಹಕ್ಕಿಗಳ ಕಲರವ ಶುರುವಾಗಲಿದ್ದು, ಐದು ದಿನಗಳ ಏರೋ ಇಂಡಿಯಾ ಪ್ರದರ್ಶನದಲ್ಲಿ ಗಗನ ಹಕ್ಕಿಗಳ ಪ್ರದರ್ಶನಗಳು ಸಾರ್ವಜನಿಕರನ್ನು ಬೆರಗುಗೊಳಿಸಲಿದೆ. ಈ ಬಾರಿಯ ಏರ್ ಶೋಗೆ ವಿದೇಶದಿಂದ 109 ಸೇರಿದಂತೆ 807 ಪ್ರದರ್ಶಕರು ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನದಲ್ಲಿ ಹಲವು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಲಿವೆ.
ಅಮೆರಿಕದ ಅತಿದೊಡ್ಡ ನಿಯೋಗ ಭಾಗಿ: ಅಮೆರಿಕದ ಸೇನಾ ಪಡೆಯ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಅತ್ಯಾಧುನಿಕ ವಿಮಾನಗಳು ಈ ಬಾರಿಯ ಏರೋ ಇಂಡಿಯಾ ಶೋನಲ್ಲಿ ಭಾಗಿಯಾಗಲಿವೆ. ಅಮೆರಿಕದ ಪ್ರಮುಖ ಸೇನಾ ಕಂಪನಿಗಳಾದ ‘ಏರೋ ಮೆಟಲ್ಸ್ ಅಲಯನ್ಸ್’, ‘ಆಸ್ಟ್ರೋನಾಟಿಕ್ಸ್ ಕಾರ್ಪೊರೇಷನ್ ಆಫ್ ಅಮೆರಿಕ’, ಬೋಯಿಂಗ್, ಜಿಇ ಏರೋಸ್ಪೇಸ್, ಜನರಲ್ ಅಟಾಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್, ಹೈಟೆಕ್ ಇಂಪೋರ್ಟ್ ಎಕ್ಸ್ಪೋರ್ಟ್ ಕಾರ್ಪೊರೇಷನ್, ಜೋನಲ್ ಲ್ಯಾಬೊರೇಟರೀಸ್, ಲಾಕ್ ಹೀಡ್ ಮಾರ್ಟಿನ್ ಪಾಲ್ಗೊಳ್ಳಲಿವೆ.
ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ದ್ವಿಪಕ್ಷೀಯ ಬೆಂಬಲ ನೀಡುವ ದಿಸೆಯಲ್ಲಿ ಅಮೆರಿಕದ ವಾಯುಪಡೆಯ ಏಳು ಸದಸ್ಯರ ಬ್ಯಾಂಡ್ ‘ಫೈನಲ್ ಅಪ್ರೋಚ್’ ಫೆಬ್ರುವರಿ 16ರಂದು ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಹಾಗೂ ಇಡೀ ವಾರ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.
ಡಿಆರ್‌ಡಿಒ– ತಂತ್ರಜ್ಞಾನಗಳ ಪ್ರದರ್ಶನ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಈ ಬಾರಿಯ ಏರೋ ಇಂಡಿಯಾದಲ್ಲಿ ಪ್ರದರ್ಶಿಸಲಿದೆ. ಸುಮಾರು 330 ಉತ್ಪನ್ನಗಳನ್ನು ಡಿಆರ್‌ಡಿಒ ಪ್ರದರ್ಶಿಸಲಿದೆ. ‘ಆತ್ಮನಿರ್ಭರ್ ಭಾರತ’ ಆಶಯದೊಂದಿಗೆ ತಯಾರಿಸಲಾದ ಕ್ಷಿಪಣಿಗಳು, ಮೈಕ್ರೊ ಎಲೆಕ್ಟ್ರಾನಿಕ್ ಉಪಕರಣಗಳು, ಯೋಧರಿಗೆ ನೆರವಾಗುವ ಉಪಕರಣಗಳು, ಯುದ್ಧ ವಿಮಾನಗಳು, ಮಾನವ ರಹಿತ ವಿಮಾನ, ಕೃತಕ ಬುದ್ಧಿಮತ್ತೆ, ಸೈಬರ್ ವ್ಯವಸ್ಥೆ ಸೇರಿದಂತೆ ವಿವಿಧತಂತ್ರಜ್ಞಾನಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.