ಭಟ್ಕಳ: ಜಲಜೀವನ ಮಿಷನ್ ಯೋಜನೆಯು ದೇಶದಾದ್ಯಂತ ಯಶಸ್ವಿಯಾಗಿ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕವನ್ನು ಕಲ್ಪಿಸಿಕೊಡುವುದರ ಮುಖಾಂತರ ಕುಡಿಯುಲು ಶುದ್ಧವಾದ ಮತ್ತು ಸಂರಕ್ಷಿತವಾದ ನೀರನ್ನು ಪ್ರತಿ ವ್ಯಕ್ತಿಗೆ 55 ಎಲ್‌ಪಿಸಿಡಿ ಲೀಟರ್ ನೀರನ್ನು ಈ ಯೋಜನೆಯ ಮುಖಾಂತರ ನೀಡಲಾಗುತ್ತಿದೆ. ಸಾರ್ವಜನಿಕರ ಸಹಭಾಗಿತ್ವ ತುಂಬಾ ಮುಖ್ಯವಾಗಿರುವುದರಿಂದ ಜಲಜೀವನ ಮಿಷನ್ ಯೋಜನೆಗೆ ಸ್ಥಳೀಯವಾಗಿ ಎಲ್ಲರೂ ಸ್ಪಂದಿಸಿ ಯಶಸ್ವಿಗೊಳಿಸಬೇಕೆಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಚಿಕ್ಕನ್ಮನೆ ಕರೆ ನೀಡಿದರು.
ಅವರು ತಾಲೂಕು ಪಂಚಾಯತಿಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಪ್ಯಾಕೇಜ್ 1 ಪರಿವರ್ತನಾ ಮಹಿಳಾ ಮಂಡಳ ಬೆಳಗಾವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೂದು ನೀರು ನಿರ್ವಹಣೆ ಮತ್ತು ಮಳೆನೀರು ಕೊಯ್ಲು ನಿರ್ವಹಣೆ ಒಂದು ದಿನದ ತಾಲೂಕು ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗ, ಸ.ಕಾ.ನಿ. ಅಭಿಯಂತರರು, ಮಲ್ಲಪ್ಪ ಮಡಿವಾಳ, ಜಲಜೀವನ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ವೆಂಕಟೇಶ ನಾಯಕ, ಪರಿವರ್ತನಾ ಎಂಎpಕೆ ಸಂಸ್ಥೆಯ ತಂಡದ ನಾಯಕಿ ಅನಿತಾಕುಮಾರಿ ವೇದಿಕೆಯಲ್ಲಿದ್ದು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾದ ಜೋಸೆಫ್ ಎಂ.ರೆಬೆಲ್ಲೊ ಸ್ವಚ್ಛತೆ, ಶುಚಿತ್ವ, ಮಳೆನೀರು ಕೊಯ್ಲು ನಿರ್ವಹಣೆ ಹಾಗೂ ನೀರಿನ ಮಲಿನತೆಯ ಸಮಸ್ಯೆಗಳು,ವಿಚಾರಗಳು ಮತ್ತು ನೀರಿನ ಸುಸ್ಥಿರತೆ ಹಾಗೂ ಜಲ ಸಂರಕ್ಷಣಾ ವಿಧಾನದ ಕುರಿತು ಪರಿಣಾಮಕಾರಿ ತರಬೇತಿ ನೀಡಿದರು. ಜಿಲ್ಲಾ ಯೋಜನಾ ವ್ಯವಸ್ಥಾಪಕ ವೆಂಕಟೇಶ ನಾಯಕ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ರಚನೆ ಕಾರ್ಯಚರಣೆ, ಜವಾಬ್ದಾರಿ ಮತ್ತು ಯೋಜನೆಗಳ ಕುರಿತಾಗಿ ತರಬೇತಿ ನೀಡಿದರು.
ಈ ತರಬೇತಿ ಕಾರ್ಯಗಾರದಲ್ಲಿ ಗ್ರಾ.ಪಂ. ಪಂ.ಅ.ಅಧಿಕಾರಿಗಳು, VWSC ಸದಸ್ಯರು, ಆಶಾ/ ಅಂಗನವಾಡಿ ಕಾರ್ಯಕರ್ತೆಯವರು, ನೀರು ಗಂಟಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಸಮುದಾಯ ಸಂಘಟಕರಾದ ವಿದ್ಯಾ ಗುನಗಿ ರವರು ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕರಾಗಿ ತಂಡದ ನಾಯಕಿ ಅನಿತಾಕುಮಾರಿ ರವರು ಕಾರ್ಯನಿರ್ವಹಿಸಿದರು. ಕೊನೆಯಲ್ಲಿ ಜಿಲ್ಲಾ ಯೋಜನಾ ವ್ಯವಸ್ಥಾಪಕರು ವೆಂಕಟೇಶ ನಾಯಕ ರವರು ವಂದನಾರ್ಪಣೆ ಸಲ್ಲಿಸಿದರು.