ಅಂಕೋಲಾ: ತಾಲೂಕಾ ಕಾನೂನು ಸೇವಾ ಸಮಿತಿ ಅಂಕೋಲಾ ವಕೀಲರ ಸಂಘ ಅಂಕೋಲಾ ಮತ್ತು ಶ್ರೀರಾಮ ಸ್ಟಡಿ ಸರ್ಕಲ್ ಜಂಟಿಯಾಗಿ 26ನೇ ರಾಷ್ಟ್ರೀಯ ಯುವ ದಿನವನ್ನು ನಗರದ ಶ್ರೀ ವೀರಾಂಜನೇಯ ಸಭಾಮಂಟಪದಲ್ಲಿ ಆಚರಿಸಲಾಯಿತು. ಈ ಸಮಾರಂಭದ ಉದ್ಘಾಟನೆಯನ್ನು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ. ನೆರವೇರಿಸಿದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ, ವಿದ್ಯಾರ್ಥಿಗಳು ಅಂತಃಕರಣ ಶಕ್ತಿಯನ್ನು ಸ್ವಾಮಿ ವಿವೇಕಾನಂದರಂತೆ ಬಡಿದೆಬ್ಬಿಸಿಕೊಳ್ಳಬೇಕೆಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀರಾಮ ಸ್ಟಡಿ ಸರ್ಕಲ್‌ನ ನಿರ್ದೇಶಕ ಸೂರಜ ನಾಯಕ ವಹಿಸಿಕೊಂಡು ಮಾತನಾಡುತ್ತ, ಸ್ವಾಮಿ ವಿವೇಕರ ತತ್ವ-ಚಿಂತನೆಗಳು ಪ್ರಸ್ತುತ ಯುವಕರು ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಿವಿಲ್ & ಜೆಎಂಎಫ್‌ಸಿ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಮಾತನಾಡುತ್ತ, ಇಂದಿನ ಯುವಕರಲ್ಲಿ ಕಾನೂನು ಪ್ರಜ್ಞೆ ಇರಬೇಕು. ತಾಲೂಕು ಕಾನೂನು ಸೇವಾ ಸಮಿತಿ ಬಡವರಿಗೆ ಕಾನೂನು ನೆಲೆಯನ್ನು ನೀಡುತ್ತಿದ್ದ ಅದರ ಉಪಯೋಗ ಸಮಾಜ ಪಡೆಯುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಇನ್ನೋರ್ವ ನ್ಯಾಯಾಧೀಶರಾದ ಅರ್ಪಿತಾ ಚಿಲ್ಲದ ಮಾತನಾಡುತ್ತ, ನಿಮ್ಮನ್ನು ನೀವು ನಂಬದೇ ದೇವರನ್ನು ನಂಬಲು ಸಾಧ್ಯವಿಲ್ಲ ಎಂಬ ವಿವೇಕರ ವಾಣಿಯನ್ನು ಉಚ್ಚರಿಸಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಶೇಷವಾದ ಕೌಶಲ್ಯಗಳಿದ್ದು ಅದನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು. ಯುವಕರು ಯಾವುದೇ ಆಕರ್ಷಣೆಗೆ ಒಳಗಾಗದೇ ಸೂರ್ಯನಂತೆ ಸ್ಥಿರವಾಗಿರಬೇಕೆಂಬ ಸಂದೇಶವನ್ನು ಸಹಾಯಕ ಸಹಕಾರಿ ಅಭಿಯೋಜಕಿ ಶಿಲ್ಪಾ ನಾಯ್ಕ ನೀಡಿದರು.
ಹಿರಿಯ ನ್ಯಾಯವಾದಿ ವಿ.ಎಸ್.ನಾಯಕ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಕೀಲ ಸಂಘದ ಅಧ್ಯಕ್ಷ ಬೀರಣ್ಣ ನಾಯಕ ಉಪಸ್ಥಿತರಿದ್ದರು. ದಿವ್ಯಾ ಯಲ್ಲಾಪುರ ಸ್ವಾಗತಗೀತೆಯನ್ನು ಹಾಡಿದರು. ವಿದ್ಯಾ ಭಟ್ಕಳ ಸ್ವಾಗತ & ನಿರೂಪಣೆಯನ್ನು ನೆರವೇರಿಸಿಕೊಟ್ಟರು.