ಮುಂಬಯಿ: ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಉದ್ಯಮಗಳನ್ನು ಸೆಳೆಯುವ ಪ್ರಯತ್ನದಲ್ಲಿರುವ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಸ್ತುತ ಮುಂಬಯಿ ಪ್ರವಾಸದಲ್ಲಿದ್ದಾರೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಂಬೈನಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಉತ್ತರಪ್ರದೇಶ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಫಿಲ್ಮ್ ಸಿಟಿ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ಯುಪಿ ಸಿಎಂ ಕಚೇರಿಯ ಹೇಳಿಕೆಯ ಪ್ರಕಾರ, ಅಕ್ಷಯ್ ಮತ್ತು ಆದಿತ್ಯನಾಥ್ ಅವರ ಭೇಟಿಯು 35 ನಿಮಿಷಗಳ ಕಾಲ ನಡೆಯಿತು, ಈ ಸಮಯದಲ್ಲಿ ನಟ ತಮ್ಮ ‘ರಾಮ ಸೇತು’ ಚಲನಚಿತ್ರವನ್ನು ವೀಕ್ಷಿಸಲು ಯೋಗಿ ಅವರಿಗೆ ಮನವಿ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಹೊಸ ಫಿಲ್ಮ್ ಸಿಟಿಯನ್ನು ನಿರ್ಮಿಸಿದ್ದಕ್ಕಾಗಿ ಅಕ್ಷಯ್ ಯೋಗಿ ಅವರನ್ನು ಶ್ಲಾಘಿಸಿದರು ಮತ್ತು ಹಿಂದಿ ಚಲನಚಿತ್ರೋದ್ಯಮವು ಫಿಲ್ಮ್ ಸಿಟಿಯನ್ನು ಎಷ್ಟು ಕಾತುರದಿಂದ ನಿರೀಕ್ಷಿಸುತ್ತಿದೆ ಎಂದು ವಿವರಿಸಿದ್ದಾರೆ.
ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಹೊಸ ಫಿಲ್ಮ್ ಸಿಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ ಮತ್ತು ಯೋಜನೆಯ ಬಗ್ಗೆ ಹೆಚ್ಚಿನ ಉತ್ಸಾಹವಿದೆ ಎಂದು ಅಕ್ಷಯ್ ಹೇಳಿದ್ದಾರೆ. ಯುಪಿಯಲ್ಲಿ ವಿಶ್ವ ದರ್ಜೆಯ ಚಲನಚಿತ್ರ ಮತ್ತು ಇನ್ಫೋಟೈನ್‌ಮೆಂಟ್ ಸಿಟಿಯ ಅಭಿವೃದ್ಧಿಯು ಚಲನಚಿತ್ರ ವ್ಯವಹಾರದಲ್ಲಿರುವವರಿಗೆ ತಮ್ಮ ಯೋಜನೆಗಳನ್ನು ಯೋಜಿಸಲು ಹೊಸ ಆಯ್ಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕೃಪೆ: http://news13.in