ಯಲ್ಲಾಪುರ: ಜಿಲ್ಲೆ ಒಡೆಯುವ ಅಗತ್ಯತೆ ಇಲ್ಲ, ಸರ್ಕಾರ ಜಿಲ್ಲೆ ವಿಭಜಿಸುವ ನಿರ್ಣಯ ಮಾಡಿದರೆ ಜಿಲ್ಲಾ ಕೇಂದ್ರ ಯಲ್ಲಾಪುರವೇ ಆಗಬೇಕು ಎಂದು ಯಲ್ಲಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಹಾಗೂ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಕ್ರಿಯಾ ಸಮಿತಿ ಜಂಟಿಯಾಗಿ ಕರೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪ್ರಮುಖರು, ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಜಿಲ್ಲೆ ವಿಭಜನೆಯಾದರೆ ಘಟ್ಟದ ಮೇಲಿನ ತಾಲೂಕುಗಳ ಹೊಸ ಜಿಲ್ಲೆಗೆ ಜಿಲ್ಲಾ ಕೇಂದ್ರ ಯಲ್ಲಾಪುರವೇ ಆಗಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಬೇಕು. ತಾಲೂಕಿನ ಹಲವು ಜನ ಶಿರಸಿ ಕೇಂದ್ರವಾಗಬೇಕು ಎಂದು ಹೇಳಿಕೆ ಬರುತ್ತಿರುವುದು ಕೇವಲ ವದಂತಿ. ಜನರ ದಾರಿ ತಪ್ಪಿಸುವ ಕೃತ್ಯವಾಗಿದೆ. ಹೀಗಾಗಿ ತಾಲೂಕಿನ ಯಾವತ್ತು ಜನ ವಿಭಜಿತ ಜಿಲ್ಲೆಯ ಜಿಲ್ಲಾ ಕೇಂದ್ರ ಶಿರಸಿ ಆಗಲು ಒಪ್ಪಲಾರರು. ಘಟ್ಟದ ಮೇಲಿನ ಪ್ರತಿಯೊಂದು ತಾಲೂಕಿಗಳಿಗೆ ಯಲ್ಲಾಪುರ ಮಧ್ಯವರ್ತಿ ಸ್ಥಳವಾಗಿದೆ. ಯಲ್ಲಾಪುರವು ಕೂಡ ಜಿಲ್ಲಾ ಕೇಂದ್ರವಾದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಲಿದೆ. ಇಲ್ಲಿ ಅಭಿವೃದ್ಧಿಪಡಿಸಲು ಮೂಲಭೂತ ಸೌಕರ್ಯಗಳಿವೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ರಾಜ್ಯ ವಿಕೇಂದ್ರಿಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಐದು ನದಿಗಳನ್ನು ವಿಭಜಿಸಲು ಸಾಧ್ಯವಿಲ್ಲ. ಹಾಗೆಯೇ ಜಿಲ್ಲೆಯನ್ನು ಕೂಡ ವಿಭಜಿಸಲು ಸಾಧ್ಯವಿಲ್ಲ. ಜಿಲ್ಲೆಯ ವಿಭಜನೆ ಆಗಬೇಕು ಎಂದು ಜನರು ಒಮ್ಮತದ ನಿರ್ಧಾರ ಮಾಡಿದಾಗ ಅದರ ಬಗ್ಗೆ ವಿಚಾರ ಮಾಡುವ ಎಂದು ಹೇಳಿದರು.
ಮಲೆನಾಡು ಸೊಸೈಟಿಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಜಿಲ್ಲೆಯ ಎಲ್ಲ ತಾಲೂಕುಗಳ ಅಭಿವೃದ್ಧಿ ದೃಷ್ಟಿಯಿಂದ ಎರಡು ಜಿಲ್ಲೆ ಮಾಡುವುದರಲ್ಲಿ ತಪ್ಪಿಲ್ಲ, ಹೆಚ್ಚಿನ ಅನುದಾನಗಳು ಕೂಡ ಸರ್ಕಾರದಿಂದ ಹೊಸ ಜಿಲ್ಲೆಗೆ ಲಭ್ಯವಾಗಲಿದೆ. ಜಿಲ್ಲಾ ಕೇಂದ್ರ ಯಲ್ಲಾಪುರವೇ ಆಗಬೇಕು ಎಂದರು.
ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಜಿಲ್ಲೆ ವಿಭಜಿಸಲು ನಮ್ಮ ಹೋರಾಟವಲ್ಲ, ಸರ್ಕಾರ ಜಿಲ್ಲೆ ವಿಭಜಿಸುವ ನಿರ್ಧಾರಕ್ಕೆ ಬಂದರೆ, ಜಿಲ್ಲಾ ಕೇಂದ್ರ ಯಲ್ಲಾಪುರ ಆಗಬೇಕು ಎನ್ನುವುದಕ್ಕಾಗಿ ನಮ್ಮ ಹೋರಾಟ, ಅದಕ್ಕಾಗಿ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಯಲ್ಲಾಪುರದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ್, ವಿಶ್ರಾಂತ ಪ್ರಾಂಶುಪಾಲರುಗಳಾದ ಬೀರಣ್ಣ ನಾಯಕ ಮೊಗಟಾ ಹಾಗೂ ಶ್ರೀರಂಗ ಕಟ್ಟಿ, ಸಾಮಾಜಿಕ ಕಾರ್ಯಕರ್ತ ಬಾಹು ದೇವನಳ್ಳಿ, ಬಿಜೆಪಿ ಮಂಡಳ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ನಿವೃತ್ತ ತಹಶೀಲ್ದಾರುಗಳಾದ ಡಿ.ಜಿ.ಹೆಗಡೆ ಹಾಗೂ ತುಳಸಿ ಪಾಲೇಕರ, ವಿವಿಧ ಕನ್ನಡಪರ ಸಂಘಟನೆ ಹಾಗೂ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ, ಪ.ಪಂ ಸದಸ್ಯ ಸತೀಶ ನಾಯ್ಕ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ದ್ಯಾಮಣ್ಣ ಭೋವಿವಡ್ಡರ್, ಮಾರುತಿ ಭೊವಿವಡ್ಡರ, ವಕೀಲರಾದ ಬಿಬಿ ಅಮೀನಾ ಶೇಕ್, ಪ್ರಮುಖರಾದ ನಾಗೇಶ ಯಲ್ಲಾಪುರಕರ, ಶೋಭಾ ಹುಲಮನಿ, ಸಿ ಜಿ ಹೆಗಡೆ, ಅಂಬೇಡ್ಕರ್ ಸಂಘದ ಜಗನ್ನಾಥ ರೇವಣಕರ, ವಿದ್ಯುತ್ ಗುತ್ತಿಗೆದಾರರ ಸಂಘದ ವೇಣುಗೋಪಾಲ ಮದ್ಗುಣಿ, ನಿವೃತ್ತ ಅಧಿಕಾರಿಗಳಾದ ಎಲ್ ಎಸ್ ಜಾಲಿಸತ್ಗಿ, ಸುರೇಶ ಬೋರಕರ, ನಿವೃತ್ತ ಬ್ಯಾಂಕ ಅಧಿಕಾರಿ ಗಜಾನನ ನಾಯ್ಕ, ನಿವೃತ್ತ ಅರಣ್ಯಾಧಿಕಾರಿ ಎಂ ಜಿ ನಾಯ್ಕ, ಪ್ರಮುಖರಾದ ವಿನೋದ ತಳೇಕರ, ಸಂತೋಷ ಗುಡಿಗಾರ, ಕೇಬಲ್ ನಾಗೇಶ, ಜಗದೀಶ ನಾಯಕ ಮುಂತಾದವರು ಇದ್ದರು.