ಶಿರಸಿ: ಜಿಪಿಎಸ್ ಸರ್ವೇಯ ಮಾನದಂಡದಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಅಗಳ ಹೊಡೆಯುವ ಅರಣ್ಯ ಸಿಬ್ಬಂದಿಗಳ ಕೃತ್ಯ ಸ್ಥಗಿತಕ್ಕೆ ಆದೇಶಿಸಿ ಇಲ್ಲದಿದ್ದರೆ, ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯದ ವಿರುದ್ಧ ಶಿರಸಿ ಸಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದೆ.
ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದ ನಿಯೋಗ ಶಿರಸಿಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರ ಕಚೇರಿಯಲ್ಲಿ ಮೇಲಿನಂತೆ ಮನವಿ ನೀಡಿ ಆಗ್ರಹಿಸಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜರುಗಿದ ಅಸಮರ್ಪಕ ಜಿಪಿಎಸ್ ಸರ್ವೇಯ ಮಾನದಂಡದಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಕಾನೂನು ಬಾಹಿರವಾಗಿ ಅಗಳ ಹೊಡೆದು ಅರಣ್ಯವಾಸಿಗಳ ಸಾಗುವಳಿಗೆಗೆ ಆತಂಕ ಉಂಟುಮಾಡುವ ಕಾರ್ಯ ಜರುಗಿಸುತ್ತಿರುವುದರಿಂದ ಇಂತಹ ಕಾನೂನು ಬಾಹಿರ ಕೃತ್ಯದ ಸ್ಥಗಿತಕ್ಕೆ ಆದೇಶ ನೀಡಬೇಕೆಂದು ನಿಯೋಗವು ಆಗ್ರಹಿಸಿತು.
ನಿಯೋಗದಲ್ಲಿ ಹೋರಾಟಗಾರರ ಧುರೀಣರಾದ ಇಬ್ರಾಹಿಂ ಗೌಡಳ್ಳಿ, ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಖಂಡ್ರಾಜಿ, ಹರಿಹರ ನಾಯ್ಕ ಓಂಕಾರ, ದಿನೇಶ್ ನಾಯ್ಕ ಬೇಡ್ಕಣಿ, ಮಾಬ್ಲೇಶ್ವರ ನಾಯ್ಕ ಸಿದ್ಧಾಪುರ, ರಾಜು ಮುಕ್ರಿ ಗಣೇಶನಗರ, ಆನಂದ ಗೌಡ ಶಿರಗುಣಿ, ಪುರುಷೋತ್ತಮ ಮರಾಠಿ ಬೈಲಗದ್ದೆ ಮುಂತಾದವರು ಉಪಸ್ಥಿತರಿದ್ದರು.
ಕಾನೂನು ಬಾಹಿರ ಕೃತ್ಯ- ಕಾನೂನು ಬಾಹಿರ ಒಕ್ಕಲೆಬ್ಬಿಸುವಿಕೆ:
ಅರ್ಜಿಗಳನ್ನ ಪುನರ್ ಪರಿಶೀಲಿಸುವುದಾಗಿ ಸುಪ್ರಿಂ ಕೋರ್ಟಿಗೆ ಕೇಂದ್ರ ಸರಕಾರ ಪ್ರಮಾಣ ಪತ್ರ ಸಲ್ಲಿಸಿರುವುದರಿಂದ, ಅರ್ಜಿ ವಿಚಾರಣೆ ಹಂತದಲ್ಲಿ ಇರುವ ಸಂದರ್ಭದಲ್ಲಿ ಹಾಗೂ ಅರಣ್ಯ ಹಕ್ಕು ಕಾಯಿದೆಯಲ್ಲಿ -‘ಅರಣ್ಯವಾಸಿಯ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆಯು ಪೂರ್ಣವಾಗುವರೆಗೂ ಅವನ ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಅವನನ್ನು ಒಕ್ಕಲೆಬ್ಬಿಸತಕ್ಕದ್ದಲ್ಲ ಅಥವಾ ಹೊರಹಾಕತಕ್ಕದ್ದಲ್ಲ ಎಂದು ಕಾನೂನಿನಲ್ಲಿ ಉಲ್ಲೇಖ’ ಇರುವುದರಿಂದ, ಅಸಮರ್ಪಕ ಜಿಪಿಎಸ್ ಕುರಿತು ಅರಣ್ಯವಾಸಿಗಳು ಸಲ್ಲಿಸಿದ ‘ಮೇಲ್ಮನವಿ’ ವಿಚಾರಣೆ ಹಂತದಲ್ಲಿ ಇರುವ ಸಂದರ್ಭದಲ್ಲಿ ಹಾಗೂ ಒಕ್ಕಲೆಬ್ಬಿಸುವ ಪ್ರಕ್ರಿಯೆ ಕರ್ನಾಟಕ ಅರಣ್ಯ ಕಾಯಿದೆ ಪ್ರಕ್ರಿಯೆ ಜರುಗಿಸದೇ ಅರಣ್ಯವಾಸಿಯ ಬೋಗ್ವಟೆಯ ಸಾಗುವಳಿ ಭೂಮಿಯ ಕಬ್ಜಾ ಪಡೆಯಲು ಬರಲಾರದು ಎಂದು ಅರಣ್ಯ ಸಿಬ್ಬಂದಿಗಳ ಕೃತ್ಯ ಕಾನೂನು ಬಾಹಿರವಾಗಿದೆ ಎಂದು ಚರ್ಚೆಯ ಸಂದರ್ಭದಲ್ಲಿ ರವೀಂದ್ರ ನಾಯ್ಕ ಹೇಳಿದರು.