ಹೊನ್ನಾವರ: ಕುದ್ರಗಿ ಗ್ರಾಮವನ್ನು ಮಾದರಿಯನ್ನಾಗಿಸಲು ಮುನ್ನುಡಿ ಬರೆಯುತ್ತೇನೆ ಎಂದು ಶಾಸಕ ಸುನೀಲ ನಾಯ್ಕ ಭರವಸೆ ನೀಡಿದರು.
ಅವರು ‘ಗ್ರಾಮಗಳ ಅಭಿವೃದ್ಧಿ- ದೇಶದ ಅಭಿವೃದ್ಧಿ, ಹಳ್ಳಿಗಳತ್ತ ಶಾಸಕ ಸುನೀಲ ನಾಯ್ಕ ಚಿತ್ತ’ ಎನ್ನುವ ಧ್ಯೇಯದೊಂದಿಗೆ ಗ್ರಾಮದ ವಿವಿಧ ಕಾಮಗಾರಿಗೆ ಅಡಿಗಲ್ಲು ಸಮಾರಂಭ ಮತ್ತು ಸಾರ್ವಜನಿಕ ಸನ್ಮಾನ ಕಾರ್ಯಕ್ರಮಕ್ಕೆ ಕುದ್ರಗಿ ಪ್ರಾಥಮಿಕ ಆರೊಗ್ಯ ಕೇಂದ್ರದ ಆವಾರದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಗೆಲ್ಲುವಾಗ ಬಿಜೆಪಿಯಿಂದ ಗೆದ್ದು, ಆಯ್ಕೆಯಾದ ಬಳಿಕ ಪಕ್ಷ ನೋಡದೇ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಿದ್ದೇನೆ. ಅಧಿಕಾರ ಇದ್ದಾಗ ನನ್ನ ಜನರಿಗೆ ಏನು ನೀಡಿದ್ದೇನೆ ಎನ್ನುವುದು ಮುಖ್ಯವಾಗಿದೆ. ಜನಸೇವಕನಾಗಿ ನಿಮ್ಮ ಸಂಕಷ್ಟ ಬಗೆಹರಿಸುವ ಕಾರ್ಯ ಮಾಡಲಾಗಿದೆ. ನಾನು ಚುನಾವಣೆ ನಿಂತು ಶಾಸಕನಾದರೆ ಒಂದೇ ವರ್ಷದಲ್ಲಿ ಈ ಭಾಗದಲ್ಲಿ ಸೇತುವೆ ನಿರ್ಮಾಣ ಮಾಡಿಸುತ್ತೇನೆ. ಇಂದು ನೀಡಿದ ಮನವಿಯನ್ನು ಮುಂದಿನ ದಿನದಲ್ಲಿ ಅನುಷ್ಠಾನಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಜೈವಂತ ಪ್ರಭು ಮಾತನಾಡಿ, ಕುದ್ರಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ತೀರಾ ಹದಗೆಟ್ಟಿತ್ತು. ಯಾರೇ ಅಧಿಕಾರ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಬಹುವರ್ಷದ ಬೇಡಿಕೆಯಾದ ವಿವಿಧ ಯೋಜನೆಗಳನ್ನು ಶಾಸಕ ಸುನೀಲ ನಾಯ್ಕ ಅವಧಿಯಲ್ಲಿ ನಡೆದಿದೆ. 4 ಕೋಟಿ ವೆಚ್ಚದ ಕಾಮಗಾರಿ ಶಾಸಕರ ಅನುದಾನದಿಂದ ಈಗಾಗಲೇ ನಡೆದಿದ್ದು, 2 ಕೋಟಿ ವೆಚ್ಚದ ಕಾರ್ಯ ಮುಂದಿನ ದಿನದಲ್ಲಿ ನಡೆಯುವ ಮೂಲಕ ಕುದ್ರಗಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ನಾವೆಲ್ಲರು ನಿಮ್ಮ ಜೊತೆ ಇರಲಿದ್ದೇವೆ. ನಿಮ್ಮ ವಿರುದ್ಧ ಯಾರೆ ಷಡ್ಯಂತ್ರ ಮಾಡಿದರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ನಿಮ್ಮ ಗೆಲುವಿಗೆ ದೇವಾಲಯದ ಮಹದ್ವಾರ ನಿರ್ಮಾಣವೇ ಶ್ರೀರಕ್ಷೆಯಾಗಲಿದೆ ಎಂದರು.
ಶ್ರೀಪಾದ ಗೌಡ ಮಾತನಾಡಿ, 70 ವರ್ಷದಲ್ಲಿ ಕಾಣದ ಅಭಿವೃದ್ಧಿ 5 ವರ್ಷದಲ್ಲಿ ಆಗಿದೆ. ಪಕ್ಷ ಧರ್ಮದ ತಾರತಮ್ಯ ಮಾಡದೇ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಮಂಜುನಾಥ ನಾಯ್ಕ, ಪ್ರಮೋದ ನಾಯ್ಕ, ಮಹೇಶ ನಾಯ್ಕ, ಬಿಜೆಪಿ ಮುಖಂಡರಾದ ಗಣಪತಿ ನಾಯ್ಕ ಬಿ.ಟಿ., ಮಾರುತಿ ನಾಯ್ಕ, ಪಕ್ಷದ ಪದಾಧಿಕಾರಿಗಳು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.