ಶಿರಸಿ: ತಾಲೂಕಿನ ಶ್ರೀ ಕ್ಷೇತ್ರ ಕೊಳಗೀಬೀಸ್’ನ ಶ್ರೀ ಮಾರುತಿ ದೇವಸ್ಥಾನದ ಆವಾರದಲ್ಲಿ ಚಂಪಾಷಷ್ಠಿ ಪ್ರಯುಕ್ತ ಅನುಗ್ರಹ ಸಂಮಾನ ಹಾಗೂ ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವ ಮಂಗಳವಾರದಿಂದ ಆರಂಭಗೊಂಡಿದೆ.
ವಿ.ಕುಮಾರ ಭಟ್ ಅವರ ಪ್ರಧಾನ ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಕಾರ್ತಿಕೋತ್ಸವ ನಡೆಯಿತು.
ರಾತ್ರಿ 9.30ರಿಂದ ಗಣಪತಿ ಹೆಗಡೆ ತೋಟಿಮನೆ ಸಾರಥ್ಯದಲ್ಲಿ ಪೌರಾಣಿಕ ಯಕ್ಷಗಾನ ‘ಲಂಕಾದಹನ’ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಹಿಮ್ಮೆಳದಲ್ಲಿ ಭಾಗವತರಾಗಿ ಸರ್ವೇಶ್ವರ್ ಹೆಗಡೆ ಮೂರೂರು, ಮದ್ದಲೆಯಲ್ಲಿ ಗಜಾನನ ಭಂಡಾರಿ ಬೋಳ್ಗೆರೆ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ್ ಜನರನ್ನು ರಂಜಿಸಿದರೆ, ಮುಮ್ಮೇಳದ ಕಲಾವಿದರಾಗಿ ಗಣಪತಿ ಹೆಗಡೆ ತೋಟಿಮನೆ, ಸುಬ್ರಮಣ್ಯ ಹೆಗಡೆ ಮೂರೂರು, ಅಶೋಕ್ ಭಟ್ ಸಿದ್ದಾಪುರ, ಭಾಸ್ಕರ್ ಗಾಂವ್ಕರ್ ಯಲ್ಲಾಪುರ, ಈಶ್ವರ್ ಭಟ್ ಹಂಸಳ್ಳಿ, ಪ್ರಣವ್ ಭಟ್ ಸಿದ್ದಾಪುರ, ಮರುತಿ ನಾಯ್ಕ್ ಬೈಲಗದ್ದೆ ಹಾಗೂ ಹಾಸ್ಯ ಪಾತ್ರದಲ್ಲಿ ಶ್ರೀಧರ್ ಹೆಗಡೆ ಚಪ್ಪರಮನೆ ಕಾಣಿಸಿಕೊಂಡರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.
ಡಿಸೆಂಬರ್ 1 ರಂದು 4 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಉದ್ಘಾಟನೆಯನ್ನು ಹಾಗೂ ಅನುಗ್ರಹ ಸಂಮಾನವನ್ನು ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ. ಭೀಮೇಶ್ವರ ಜೋಶಿ ನಡೆಸಿಕೊಡಲಿದ್ದಾರೆ. ಅನುಗ್ರಹ ಸಂಮಾನವನ್ನು ಅಭಿವೃದ್ಧಿಯ ಹರಿಕಾರ ಹಾಗೂ ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ, ಪರಿವಾರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಹಾಗೂ ಶ್ರೀಮತಿ ಹೇಮಾ ಹೆಬ್ಬಾರ್ ದಂಪತಿಯವರು ಸ್ವೀಕರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳಗಿಬೀಸ್ ದೇವಸ್ಥಾನದ ಅಧ್ಯಕ್ಷ ಶ್ರೀಧರ್ ಹೆಗಡೆ ಇಳ್ಳುಮನೆ ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ‘ಭಾವ ಭಕ್ತಿಗೀತೆ’ ನಡೆಯಲಿದ್ದು ಗಾಯನದಲ್ಲಿ ಶ್ರೀಮತಿ ಸ್ವಯಂಪ್ರಭಾ ಹೆಗಡೆ ಬೆಂಗಳೂರು, ತಬಲಾದಲ್ಲಿ ಗಣೇಶ್ ಗುಂಡ್ಕಲ್ ಯಲ್ಲಾಪುರ, ಹಾರ್ಮೋನಿಯಂನಲ್ಲಿ ಅಜಯ್ ಹೆಗಡೆ ವರ್ಗಾಸರ ಸಹಕರಿಸಲಿದ್ದಾರೆ.
ನಂತರದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮವಾದ, ಈಗಾಗಲೇ ಶಿರಸಿ ನಗರ ಜನತೆಯ ಮನದಲ್ಲಿ ಅಚ್ಚೊತ್ತಿರುವ ಉ.ದ.ಪಾ.-2 ನಡೆಯಲಿದ್ದು ಕೊಳಲು ಖ್ಯಾತಿಯ ಅಮಿತ್ ನಾಡಿಗ್ ಸಂಯೋಜನೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದೇಶ- ವಿದೇಶ ಖ್ಯಾತಿಯ ಸಿದ್ದಾರ್ಥ ಬೆಳ್ಮಣ್ಣು, ಅನೂರ್ ವಿನೋದ್ ಶ್ಯಾಮ್, ಪ್ರಣವ್ ದಾತ್, ರೂಪಕ, ಕಲ್ಲೂರಕರ್, ಸುನಾದ್ ಅನೂರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸಂಪೂರ್ಣ ಉಚಿತ ಪ್ರವೇಶವಿದ್ದು ಭಕ್ತರು,ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗಲು ಶ್ರೀ ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.