ಹಳಿಯಾಳ: ಕನ್ನಡವೆಂದರೆ ಕೇವಲ ವರ್ಣಮಾಲೆಯಲ್ಲ. ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಈ ಭಾಷೆ ನಮ್ಮ ಉಸಿರಾಗಬೇಕು ಎಂದು ಯುವ ಸಾಹಿತಿ, ಸಂಪನ್ಮೂಲ ವ್ಯಕ್ತಿ ಸಂದೀಪ್ ಭಟ್ಟ ಹೇಳಿದರು.
ಇಲ್ಲಿನ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ತರಹದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮತ್ತು ಆ ಮೂಲಕ ಅವರ ಪ್ರತಿಭೆಯನ್ನು ಹೊರಹೊಮ್ಮಿಸುವಂತಹ ಚಟುವಟಿಕೆಗಳು ನಮಗೆ ಬೇಕಾಗಿವೆ. ಈ ನಿಟ್ಟಿನಲ್ಲಿ ಕಳೆದ ಎಂಟು ವರ್ಷಗಳಿಂದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಕನ್ನಡ ಹಬ್ಬ ಆಚರಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ನಮ್ಮ ಜನಪದ ಕಲೆಯಾದ ಡೊಳ್ಳು ವಾದ್ಯವನ್ನು ಅಲ್ಪ ಅವಧಿಯಲ್ಲಿ ವಿದ್ಯಾರ್ಥಿಗಳು ಕಲಿತು ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ಅವರ ಶ್ರದ್ಧೆ ಹಾಗೂ ಅಭಿಮಾನಕ್ಕೆ ತಲೆಬಾಗುತ್ತೇನೆ ಎಂದರು.
ಪ್ರಾಂಶುಪಾಲರಾದ ಡಿ.ಆರ್.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡದ ಕಿಚ್ಚನ್ನು ಬೆಳೆಸುವ ಈ ಕನ್ನಡ ಹಬ್ಬ ವಿದ್ಯಾರ್ಥಿಗಳಲ್ಲಿ ಅಡಗಿಕೊಂಡಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಕಾರಣೀಕರ್ತವಾಗಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಡಿ.ಡಿ.ನಾಯ್ಕ, ಕನ್ನಡ ಹಬ್ಬ ಸಂಸ್ಥೆಯಲ್ಲಿ ಬೆಳೆದು ಬಂದ ಬಗೆ ಹಾಗೂ ಪ್ರಸ್ತುತ ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ವಿ.ವಿ.ಡಿ ಶಾಲೆಯ ಪ್ರಾಂಶುಪಾಲ ಡಾ.ಸಿ.ಬಿ.ಪಾಟೀಲ ಕನ್ನಡ ಹಬ್ಬಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಿರಿಯ ತರಬೇತಿ ಅಧಿಕಾರಿ ರಾಜೇಶ ದಬಾಲಿ ಸ್ವಾಗತಿಸಿದರೆ, ವಿದ್ಯಾರ್ಥಿಗಳಾದ ಅನಿತಾ ಯಳಗುಳಕರ ನಿರೂಪಿಸಿ, ಪ್ರಜ್ವಲ ಹೂಗಾರ ವಂದಿಸಿದರು.
ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ಹುಲಿ ಕುಣಿತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿ ನೆರೆದವರನ್ನು ರಂಜಿಸಿದರು. ಈ ವರ್ಷದ ಕನ್ನಡ ಹಬ್ಬ ವಿಶಿಷ್ಟವಾಗಿ ವಿಭಿನ್ನವಾಗಿ ಆಯೋಜಿಸಿರುವುದಕ್ಕೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.