ಕುಮಟಾ: ಮಣಕಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಸೇರ್ಪಡೆಯಾಗಿಲ್ಲ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಜಿ.ಕೆ.ಪಟಗಾರ ಮತ್ತು ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಕಾಂಗ್ರೆಸ್‌ನಲ್ಲಿ ವಿಲೀನಗೊಂಡಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ. ಇದು ಸತ್ಯಕ್ಕೆ ದೂರವಾಗಿದೆ. ಜೆಡಿಎಸ್‌ನ ಜಿಲ್ಲಾ ಘಟಕ ಇನ್ನೂ ನಮ್ಮ ಪಕ್ಷದಲ್ಲೆ ಸಕ್ರಿಯವಾಗಿದೆ. ಮಾಜಿ ಜಿಲಾಧ್ಯಕ್ಷ ಬಿ ಆರ್ ನಾಯ್ಕರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರಷ್ಟೆ. ಬಿ ಆರ್ ನಾಯ್ಕ ಅವರು ರಾಜೀನಾಮೆ ನೀಡಿದ ಬಳಿಕ ಪಕ್ಷದ ಹೈಕಮಾಂಡ್ ಹಳೆ ಜಿಲ್ಲಾ ಘಟಕವನ್ನು ವಿಸರ್ಜಿಸಿ, ಹೊಸ ಘಟಕವನ್ನು ರಚನೆ ಮಾಡಿ, ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯಗೊಳ್ಳುವಂತೆ ಮಾಡಿದೆ. ಹೀಗಿರುವಾಗ ಜೆಡಿಎಸ್ ಜಿಲ್ಲಾ ಘಟಕ ಕಾಂಗ್ರೆಸ್ ಸೇರ್ಪಡೆಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಪಕ್ಷದಲ್ಲಿ ಹತ್ತು ವರ್ಷಗಳ ಕಾಲ ಇದ್ದು, ತಿಂದು ತೇಗಿ, ಮೆರೆದು ಹೋದ ಈ ಮುಖಂಡರು ಈಗ ಬ್ರಹ್ಮನಿರಸರಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ನಿಷ್ಠಾವಂತ ಒಬ್ಬನೇ ಒಬ್ಬ ಕಾರ್ಯಕರ್ತ ಕೂಡ ಪಕ್ಷ ತೊರೆದಿಲ್ಲ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಬಲೀಂದ್ರ ಗೌಡ, ಅಲ್ಪಸಂಖ್ಯಾತ ಅಧ್ಯಕ್ಷ ಬಿ.ರೆಮತ್ ಉಲ್ಲಾ ಮತ್ತು ಹಿಂದುಳಿದ ವರ್ಗಗಳ ಅಧ್ಯಕ್ಷ ಸತೀಶ್ ಮಹಾಲೆ ಸ್ಪಷ್ಟಪಡಿಸಿದ್ದಾರೆ.