ಶಿರಸಿ: ರಾಜ್ಯಮಟ್ಟದಲ್ಲಿಯೇ ಮೂದಲ ಬಾರಿಗೆ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಹಮ್ಮಿಕೊಳ್ಳುತ್ತಿರುವ ಕನ್ನಡ ನುಡಿ ನಮನದ ಪುನೀತ್ ರಾಜಕುಮಾರ ನೆನಪಿನ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಯುವಕ- ಯುವತಿಯರು ಪುನೀತ್ ರಾಜಕುಮಾರ ನಟಿಸಿದ ಚಿತ್ರದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಸ್ಪಂದನ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ನ.11ರ ನುಡಿ ನಮನ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ನೃತ್ಯದಲ್ಲಿ ಸ್ಥಳೀಯ ಯುವ ಸಮೂಹಕ್ಕೂ ಸಾಕಷ್ಟು ಅವಕಾಶ ನೀಡುವ ಉದ್ದೇಶದಿಂದ ಮೂರು ಪ್ರತ್ಯೇಕ ವೇದಿಕೆ ನಿರ್ಮಿಸಿದ್ದು, ಯುವತಿಯರಿಗೆ ಪ್ರತ್ಯೇಕ ವೇದಿಕೆ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಬೆಂಗಳೂರು ಪ್ರಖ್ಯಾತ ಗಾಯಕರಿಂದ ಮನರಂಜನೆ, ರಾಜ್ಯದ ಮೂರು ಪ್ರಮುಖ ನೃತ್ಯ ತಂಡದಿಂದ ನೃತ್ಯ, ಜನಪದ ಕಲೆ ಪ್ರದರ್ಶನ, ಮಣಿಪುರ ಸ್ಟೀಕ್ ಮತ್ತು ಬೆಂಕಿ ನೃತ್ಯ, ಭರತನಾಟ್ಯ, ಸಮೂಹ ನೃತ್ಯ ಮುಂತಾದ ಕಾರ್ಯಕ್ರಮ ಹಾಗೂ ಜೂನಿಯರ್ ರಾಜಕುಮಾರ ಮನರಂಜಿಸಲಿದ್ದಾರೆ ಮತ್ತು ಪ್ರತಿಭೆಗಳನ್ನು ಪುರಸ್ಕರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಲಾ ತಂಡದ ಜಾಥಾ: ಜಿಲ್ಲೆಯ ವಿಶೇಷವಾದ ಜಾನಪಥ ಕಲಾತಂಡದೊಂದಿಗೆ ಭುವನೇಶ್ವರಿ ಮತ್ತು ಪುನೀತ್ ರಾಜಕುಮಾರ ಸ್ಥಬ್ದ ಚಿತ್ರದೊಂದಿಗೆ ಕಲಾವಿದರು, ಸಾಹಿತಾಸಕ್ತರು ಹಾಗೂ ಪುನೀತ್ ರಾಜ್‌ಕುಮಾರ ಅಭಿಮಾನಿ ವೃಂದದೊಂದಿಗೆ ಅಂದು ಸಂಜೆ 4.30ಕ್ಕೆ ಶಿರಸಿಯ ಮಾರಿಕಾಂಬ ದೇವಾಲಯದಿಂದ ಜಾಥಾ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸ್ಥಳೀಯ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು ಎಂದು ರವೀಂದ್ರ ನಾಯ್ಕ ಹೇಳಿದರು.
ಈ ವೇಳೆ ಲೈಟ್ ತಂತ್ರಜ್ಞ ವಾದಿರಾಜ ಪಾವಸ್ಕರ, ಮಿಮಿಕ್ರಿ ಕಲಾವಿದ ಮಂಜು ಶೆಟ್ಟಿ, ನೃತ್ಯ ತರಬೇತುದಾರ ಮಹೇಶ್ ಶೆಟ್ಟಿ, ಹಾಡುಗಾರ ಕಾರ್ತಿಕ್, ಸಂಗೀತಗಾರ ಕಿಶೋರ ನೇತ್ರೇಕರ್ ಮುಂತಾದವರು ಇದ್ದರು.