ಶಿರಸಿ: ಮೊದಲೆಲ್ಲ ಪದವಿ ಶಿಕ್ಷಣ ಮುಗಿದ ತಕ್ಷಣ ಎಲ್ಲಿ ಉದ್ಯೋಗ ಅವಕಾಶ ಇದೆ ಎಂದು ಹುಡುಕುತ್ತಿದ್ದೆವು. ಅವಕಾಶ ಇದ್ದರೆ ಅರ್ಜಿಯನ್ನು ಹಾಕುತ್ತಿದ್ದೆವು.ಇಂದು ಕಾಲ ಬದಲಾಗಿದೆ. ಪಿಯುಸಿ ಮುಗಿದ ತಕ್ಷಣ ನಾನು ಏನಾಗಬೇಕು, ಯಾವ ಉದ್ಯೋಗವನ್ನು ಮಾಡಬೇಕು ಎಂಬುದನ್ನು ಗ್ರಹಿಸಿ ಆ ನಿಟ್ಟಿನಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಿದೆ. ಎಂದು ಎಂಎಂ ಕಾಲೇಜು ಪ್ರಾಚಾರ್ಯ ಡಾ.ಟಿ.ಎಸ್ ಹಳೆಮನೆ ಹೇಳಿದರು.
ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿಎ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪದವಿ ಒಂದೆ ಇದ್ದರೆ ಸಾಲದು ಎಷ್ಟು ಕೌಶಲ್ಯ ಹೊಂದಿದ್ದೇವೆ ಎನ್ನುವುದರ ಮೇಲೆ ಇಂದು ಉದ್ಯೋಗಾವಕಾಶ ಲಭಿಸುತ್ತದೆ. ಮೊಬೈಲ್ ಋಣಾತ್ಮಕ ಮತ್ತು ಗುಣಾತ್ಮಕ ಎರಡು ಗುಣವನ್ನು ಹೊಂದಿದೆ. ಕೌಶಲ್ಯಕ್ಕೆ ಪೂರಕವಾಗಿ ಜ್ಞಾನಾರ್ಜನೆಗಾಗಿ ಅದನ್ನು ಬಳಸಿಕೊಂಡರೆ ಉತ್ತಮ ಫಲಿತಾಂಶವನ್ನು ನೀವು ಪಡೆಯಲು ಸಾಧ್ಯ. ವಿದ್ಯಾರ್ಥಿಗಳು ಶಿಸ್ತು ಸಂಯಮವನ್ನು ರೂಡಿಸಿಕೊಳ್ಳಬೇಕು. ಇಲ್ಲದಿದ್ದರೆ ಜ್ಞಾನಾರ್ಜನೆ ದುರ್ಲಭವಾಗುತ್ತದೆ. ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಹೊಲಿಗೆ ತರಬೇತಿ ಪ್ರಾರಂಭ ಮಾಡುತ್ತಿದ್ದೇವೆ. ಹಾಗೆಯೇ ಪ್ರವಾಸೋದ್ಯಮ ಕೋರ್ಸ್ ಅನ್ನೂ ಸದ್ಯ ಪ್ರಾರಂಭಿಸುವ ಯೋಜನೆ ಇದೆ ಎಂದರು.
ವಿವಿಧ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಕಾಲೇಜಿನ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ ಜಿ.ಟಿ.ಭಟ್, ಐಕ್ಯುಎಸಿ ಸಂಚಾಲಕ ಡಾ ಎಸ್.ಎಸ್ ಭಟ್, ಸಿಬ್ಬಂದಿ ಕಾರ್ಯದರ್ಶಿ ಪ್ರೊ ಆರ್.ವೈ.ಕೊಳೇಕರ್ ಉಪಸ್ಥಿತರಿದ್ದರು.