ಯಲ್ಲಾಪುರ; ತಾಲೂಕಿನ ಕುಂದರಗಿ ಪಂಚಾಯತ್ ವ್ಯಾಪ್ತಿಯ ಭರಣಿ ಹಾಲು ಉತ್ಪಾದಕರ ಸಂಘದ ದಶಮಾನೋತ್ಸವವನ್ನು ವಿನೂತನವಾಗಿ ಆಚರಿಸಲಾಯಿತು. ಧಾತ್ರಿ ಫೌಂಡೇಶನ್, ಯಲ್ಲಾಪುರ ಇದರ ಸಹಯೋಗದಲ್ಲಿ 60 ಹಾಲು ಉತ್ಪಾದಕರಿಗೆ ಕ್ಯಾನ್ ವಿತರಿಸುವ ಮೂಲಕ ಪ್ರೋತ್ಸಾಹಿಸಲಾಯಿತು.
ಧಾತ್ರಿ ಫೌಂಡೇಶನ್ ನ ಸಂಸ್ಥಾಪಕ ಶ್ರೀನಿವಾಸ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದು ಹೈನುಗಾರಿಕೆಯಲ್ಲಿ ತೊಡಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬೆಂಬಲ ಬೆಲೆ ಇಲ್ಲದಿರುವುದು, ಸರಿಯಾದ ನಿರ್ವಹಣೆ ಕೌಶಲ್ಯ ಇಲ್ಲದಿರುವ ಕಾರಣ ಅನೇಕ ಹಾಲು ಉತ್ಪಾದಕ ಸಂಘಗಳನ್ನು ಹೆಚ್ಚು ದಿನಗಳು ಮುನ್ನಡೆಸಲಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಭರಣಿ ಹಾಲು ಉತ್ಪಾದಕರ ಸಂಘವು ತನ್ನ ಆಡಳಿತ ದಕ್ಷತೆಯಿಂದಾಗಿ ದಶಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿರುವುದು ಹೆಮ್ಮೆಯ ಸಂಗತಿ. ಸಂಘವು ಒಗ್ಗಟ್ಟಿನಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಇಂಥ ಸಾಧನೆಯಲ್ಲಿ ತೊಡಗಬಹುದಾಗಿದೆ. ಕಾರಣ ಸಂಘವನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಧಾತ್ರಿ ಫೌಂಡೇಶನ್ ವತಿಯಿಂದ ಹಾಲಿನ ಕ್ಯಾನ್ ವಿತರಿಸಲಾಗಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ವಿನಾಯಕ ಭಟ್ ಮಾತನಾಡಿ ‘ಸಂಘವು ಇಲ್ಲಿಯವರೆಗೆ ಯಶಸ್ವಿಯಾಗಿ ಮುನ್ನಡೆಯಲು ಸಂಘದ ಎಲ್ಲ ಸದಸ್ಯರು ಕಾರಣರಾಗಿದ್ದಾರೆ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ದಶಮಾನೋತ್ಸವದ ಯಶಸ್ಸಿಗೆ ಕಾರಣರಾದ ಎಲ್ಲ ಹಾಲು ಉತ್ಪಾದಕರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ವಿನಾಯಕ ಭಟ್ಟ, ಹಾಗೂ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಇವರನ್ನು ಊರಿನ ಪರವಾಗಿ ಧಾರ್ಮಿಕ ಮುಖಂಡರಾದ ಎ.ಜಿ ನಾಯ್ಕ ಭರಣಿಯವರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಧಾರ್ಮಿಕ ಮುಖಂಡರಾದ ಎ.ಜಿ ನಾಯ್ಕ ಭರಣಿ, ಗ್ರಾ.ಪಂ ಕುಂದರಗಿ ಸದಸ್ಯರುಗಳಾದ ಗಣೇಶ ಹೆಗಡೆ, ಇಂದಿರಾ ನಾಯ್ಕ, ಯಮುನಾ ಸಿದ್ದಿ, ನಿವೃತ್ತ ಸೇನಾನಿ ನಾಗಪ್ಪ ದೇವಾಡಿಗ, ಗಜಾನನೋತ್ಸವ ಸಮಿತಿ ಅಧ್ಯಕ್ಷರಾದ ಗಂಗಾಧರ ನಾಯ್ಕ ಉಪಸ್ಥಿತರಿದ್ದರು.