ಶಿರಸಿ: ಪುಟಾಣಿ ಮಕ್ಕಳು ಎತ್ತರದ ಸ್ವರದಲ್ಲಿ ನಾಡ ಗೀತೆ ಹಾಡುತ್ತಿದ್ದರು. ಸ್ವರಬದ್ಧ ಅವರ ಗಾಯನ ನೋಡುಗರಿಗೆ ಭಾಷಾಭಿಮಾನ ಮೂಡುವಂತೆ ಮಾಡಿತ್ತು.
ತಾಲೂಕಿನ ಗೋಳಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ನೆಗ್ಗು ಗ್ರಾಮ ಪಂಚಾಯಿತಿ ಹಾಗೂ ಸುತ್ತಮುತ್ತಲಿನ ಶಾಲೆಗಳ 350 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾ ಪಂ ಮಾಜಿ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ನಳ್ಳಿ, ಗುರುಪಾದ ಹೆಗಡೆ ಕಾವೇರಿಯಿಂದ ಗೋದಾವರಿವರೆಗಿನ ಪ್ರದೇಶದ ಹೆಮ್ಮೆಯ ನಾಡು ನಮ್ಮದು. ಆದಿ ಕವಿ ಪಂಪ ಮರಿದುಂಬಿಯಾಗಿಯಾದರೂ ಬನವಾಸಿಯಲ್ಲೇ ಹುಟ್ಟುತ್ತೇನೆ ಎಂದು ಹಂಬಲಿಸಿದ ತಾಲೂಕು ನಮ್ಮದಾಗಿದೆ. ಪುಟಾಣಿಗಳು ಮುಂದೊಂದು ದಿನ ಐಟಿ ಬಿಟಿ ಕ್ಷೇತ್ರದಲ್ಲಿ ಯಶಸ್ವಿ ಆದಾಗಲೂ ನಮ್ಮ ನಾಡು, ಭಾಷೆಗೇ ಮೊದಲ ಆದ್ಯತೆ ನೀಡುವಂತಾಗಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ಧನ್ಯರು ಎಂದರು.
ದೇವಾಲಯದ ಅಧ್ಯಕ್ಷ ಎಂ ಎಲ್ ಹೆಗಡೆ ಹಲಸಗಿ ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಿದರು. ನೆಗ್ಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಆಚಾರಿ, ಉಪಾಧ್ಯಕ್ಷೆ ಮಂಜುಳಾ ಪಾವಸ್ಕರ, ಸದಸ್ಯ ಚಂದ್ರಕಾಂತ ಹೆಗಡೆ, ಜನಾರ್ಧನ ಶೆಟ್ಟಿ ಇತರರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಗುಡ್ಡದಮನೆ ನಿರ್ವಹಿಸಿದರು.