ಅಂಕೋಲಾ: ತಾಲೂಕಿನ ಹೊನ್ನೆಬೈಲ್ ಗ್ರಾಮದೇವರಾದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲೆ ದೇವರ ಹೊಸ್ತಿನ ಹಬ್ಬವು ಸಂಭ್ರಮ ಸಡಗರದಿಂದ ನಡೆಯಿತು. ಮೂರು ದೇವರುಗಳ ಕಳಸವು ಅತ್ಯಂತ ಆಕರ್ಷಣೀಯವಾಗಿತ್ತು.
ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲೆ ದೇವರ ಕಳಸವು ಕಳಸ ದೇವಸ್ಥಾನದಿಂದ ಹೊತ್ತ ಗುನಗರು ವಾದ್ಯದ ಮೂಲಕ ಗದ್ದೆಗೆ ತೆರಳಿ ಪೂಜೆ ಸಲ್ಲಿಸಿ ಭತ್ತದ ಕದಿರನ್ನು ಕತ್ತರಿಸಿ ತಲೆಯ ಮೇಲೆ ಹೊತ್ತು ತಂದರು. ನಂತರ ದೇವಸ್ಥಾನಕ್ಕೆ ಆಗಮಿಸಿ ಕದಿರನ್ನು ಮಾವಿನ ಎಲೆಯಲ್ಲಿ ಸುತ್ತಿ ಅದನ್ನು ದೇವಸ್ಥಾನದ ಬಾಗಿಲುಗಳಿಗೆ ಕಟ್ಟಿದರು.
ಈ ಗ್ರಾಮದ ಹೊಸ್ತಿನ ಹಬ್ಬವು ಹೊನ್ನೆಬೈಲ್, ಬೆಳಂಬಾರ, ಮಂಜಗುಣಿ ಸೇರಿದಂತೆ ವಿವಿಧ ಗ್ರಾಮದವರು ಆಚರಿಸುತ್ತಿದ್ದು, ಅವರು ಕೂಡ ತಮ್ಮ ತಮ್ಮ ಗದ್ದೆಗಳಿಂದ ಕದಿರನ್ನು ತಂದು ಹಬ್ಬ ಆಚರಿಸಿದರು. ಹಬ್ಬದ ವಿಶೇಷವಾಗಿ ಹೊಸಕ್ಕಿ ಚಪ್ಪೆ ಪಾಯಿಸವನ್ನು ಮಾಡಿದರು.
ಈ ಸಂದರ್ಭದಲ್ಲಿ ಹೊನ್ನೆಬೈಲ್ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಗುನಗರ ಅರ್ಚಕರಾದ ವಿಠ್ಠಲ ಗುನಗ, ಗುಣವಂತ ಗುನಗ, ಗಣಪತಿ ಗುನಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.