ಶಿರಸಿ : ಭೈರುಂಬೆ ಗ್ರಾಮ ಪಂಚಾಯತ ಮಲೇನಳ್ಳಿ ಗ್ರಾಮದ ಹೊಳೆಗೆ ಅತಿವೃಷ್ಠಿಯಿಂದ ಮುರಿದು ಬಿದ್ದಿರುವ ಸೇತುವೆ ಕಾಲುಸಂಕವನ್ನು ಹುಲೇಕಲ್ ಘಟಕದ ಶೌರ್ಯ ತಂಡದ ಸ್ವಯಂ ಸೇವಕರು ನಿರ್ಮಾಣ ಮಾಡಿದರು.
ಎರಡು ವರ್ಷದಿಂದ ಅರ್ಧಭಾಗ ಮುರಿದು ಬಿದ್ದ ಸೇತುವೆಯಿಂದ ಮಲೇನಳ್ಳಿ ಶಾಲೆಗೆ ಹೋಗಿ ಬರಲು ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಓಡಾಡಲು ತುಂಬಾ ಕಷ್ಟವಾಗಿತ್ತು. ಈ ಸುದ್ಧಿ ಹುಲೇಕಲ್ ಘಟಕದ ಶೌರ್ಯ ಸ್ವಯಂ ಸೇವಕರ ಗಮನಕ್ಕೆ ಬಂದಿದ್ದು, ತಕ್ಷಣ ಕಾರ್ಯಪ್ರವೃತ್ತವಾದ ತಂಡದಿಂದ ಅ.12 ರಂದು ಕಾಲು ಸಂಕ ನಿರ್ಮಿಸಿಕೊಡಲಾಯಿತು. ಈ ಕಾಲು ಸಂಕ ನಿರ್ಮಾಣದಿಂದ ಇಲ್ಲಿಯ ಜನರಿಗೆ, ಶಾಲೆ ಮಕ್ಕಳಿಗೆ ಸಹಾಯವಾಗಿದೆ. ಈ ಸಮಯದಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ಸವಿತಾ ಮೇಡಂ, ಸೇವಾ ಪ್ರತಿನಿಧಿ ಶ್ರೀಮತಿ ಸುಜಾತ ಸ್ವಯಂ ಸೇವಕರಿಗೆ ಪ್ರೇರಣೆ ನೀಡಿದರು. ಶೌರ್ಯ ಸ್ವಯಂ ಸೇವಕರಾದ ಘಟಕದ ಪ್ರತಿನಿಧಿ ಮಂಜುನಾಥ, ಸಂತೋಷ, ನರಸಿಂಹ, ಮಂಜುನಾಥ, ಶೋಭಾ, ಮಮತಾ, ನಾರಾಯಣ, ರಮೇಶ, ವೆಂಕಟ್ರಮಣ ಹಾಗೂ ಒಕ್ಕೂಟದ ಅಧ್ಯಕ್ಷರಾದ ನಾರಾಯಣ ಗೌಡ ಈ ಶ್ರಮದಾನದಲ್ಲಿ ಭಾಗವಹಿಸಿದ್ದರು.