Slide
Slide
Slide
previous arrow
next arrow

ಹುಬ್ಬಳ್ಳಿ-ಅಂಕೋಲಾ ರೈಲು:ವಿವೇಕಯುತ ತೀರ್ಮಾನಕ್ಕೆ ಬರಲು ಕೇಶವ ಕೊರ್ಸೆ ಮನವಿ

300x250 AD

 ಶಿರಸಿ:  ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕುರಿತು ಸ್ಥಳೀಯರ ಅಭಿಪ್ರಾಯ ಪಡೆಯಲು ಕೇಂದ್ರ ಉನ್ನತ ಸಮಿತಿ ಆಗಮಿಸುತ್ತಿರುವ  ಹಿನ್ನೆಲೆಯಲ್ಲಿ, ಇದರ ಸಾಧಕ ಬಾಧಕಗಳ ಕುರಿತು ಚರ್ಚೆಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಜನರೆಲ್ಲ ಒಟ್ಟಾಗಿ ವಿವೇಕಯುತ ತೀರ್ಮಾನ ಕೈಗೊಳ್ಳಬೇಕಿದೆ.

          ಜಿಲ್ಲೆಯು ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ರೈಲು, ಹೆದ್ದಾರಿ ಇತ್ಯಾದಿ ಮೂಲಸೌಕರ್ಯಗಳು ಬೇಕೆಂಬುದರಲ್ಲಿ ಸಂಶಯವಿಲ್ಲ. ಹೀಗಾಗಿ, ಹುಬ್ಬಳ್ಳಿ-ಅಂಕೋಲಾ ರೈಲಿನ ಬೇಡಿಕೆಯೂ ನ್ಯಾಯಸಮ್ಮತವಾದದ್ದೇ. ಈ ಕುರಿತು ಯಲ್ಲಾಪುರ ಹಾಗೂ ಅಂಕೋಲಾ ಭಾಗದ ಅನೇಕ ಗೌರವಾನ್ವಿತ ಸಾಮಾಜಿಕ ಮುಖಂಡರುಗಳು ನಿರಂತರವಾಗಿ ನಾಗರಿಕ ಹೋರಾಟವನ್ನು ಮಾಡುತ್ತ ಬಂದಿದ್ದಾರೆ. ಅವರಲ್ಲಿ ಜನಪ್ರತಿನಿಧಿಗಳು, ರೈತ ಪ್ರತಿನಿಧಿಗಳು, ವ್ಯಾಪಾರ-ಉದ್ಯಮ ಕ್ಷೇತ್ರದ ಪ್ರಮುಖರು ಎಲ್ಲರೂ ಇದ್ದಾರೆ. ಅವರೆಲ್ಲರ ಸಾಮಾಜಿಕ ಕಾಳಜಿ, ಹೋರಾಟದ ಆಶಯ ಹಾಗೂ ಪ್ರಯತ್ನಗಳನ್ನು ಗೌರವಿಸುತ್ತಲೇ, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್. ಕೊರ್ಸೆ ಮನವಿಯನ್ನು ಮಾಡಿದ್ದಾರೆ.  ಉದ್ದೇಶಿತ ಹುಬ್ಬಳ್ಳಿ,ಅಂಕೋಲಾ ರೈಲು ಮಾರ್ಗದ ಸಾಧಕ-ಬಾಧಕ ಹಾಗೂ ಲಾಭ-ಹಾನಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಕಂಡುಬರುವ ಅನೇಕ ಗಂಭೀರ ಸವಾಲುಗಳಲ್ಲಿ,  ಮೂರು ಪ್ರಮುಖ ಅಂಶಗಳನ್ನು ಮಾತ್ರ ಗಮನಕ್ಕೆ ತಂದಿದ್ದು, ಅವನ್ನು ಪರಿಗಣಿಸಲು ಕೋರಿದ್ದಾರೆ.   

          ಒಂದನೇಯದು, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಹಾದು ಹೋಗುವ ಬೇಡ್ತಿನದಿ ಕಣಿವೆಯು ಅತಿಯಾದ ಭೂಕುಸಿತದ ಸಾಧ್ಯತೆ ಇರುವ ಪ್ರದೇಶವೆಂದು ಕೇಂದ್ರ ಸರ್ಕಾರದ ಭೂಗರ್ಭ ಸರ್ವೇಕ್ಷಣಾ ಸಂಸ್ಥೆಯೇ (Geological Survey of India-GSI) ವರದಿ ನೀಡಿದೆ. ಇಲ್ಲಿನ ಮಣ್ಣು-ಕಲ್ಲುಗಳ ಸ್ವರೂಪ, ಇಳಿಜಾರು, ಅರಣ್ಯದ ರಚನೆ, ಮಳೆ ಪ್ರಮಾಣ ಇತ್ಯಾದಿಗಳನ್ನೆಲ್ಲ ಆಧರಿಸಿ ಅಳವಾಗಿ ಕೈಗೊಂಡ ಭೂಗರ್ಭಶಾಸ್ತ್ರೀಯ (Geological & Geomorphologic) ಅಧ್ಯಯನದ ಸಾರವಾಗಿದೆ. ಕಳೆದ  ಕೆಲವು ವರ್ಷಗಳಿಂದ ಅರಬೈಲುಘಟ್ಟ ಹಾಗೂ ಪಕ್ಕದ ಕಾಳಿಕಣಿವೆಯ ಕಳಚೆ-ವಜ್ರಳ್ಳಿ ಪ್ರದೇಶದಲ್ಲಿ ಆಗಿರುವ ಭಾರಿ ಪ್ರಮಾಣದ ಭೂಕುಸಿತಗಳ ಅನಾಹುತಗಳು ಕಣ್ಣೆದುರಿಗಿದೆ. ಇಂಥ ಸೂಕ್ಷ್ಮಪ್ರದೇಶವನ್ನು ರೈಲುಮಾರ್ಗ ಕಾಮಗಾರಿಗಳು ಇನ್ನಷ್ಟು ಘಾಸಿಗೊಳಿಸುವದರಿಂದ, ಭವಿಷ್ಯದಲ್ಲಿ ಮತ್ತೂ ವ್ಯಾಪಕ ಭೂಕುಸಿತ ಸಂಭವಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

          ಎರಡನೇಯದು, ವನ್ಯಪ್ರಾಣಿ-ಮಾನವ ಸಂಘರ್ಷದ ಕುರಿತು. ಈಗಾಗಲೇ ಯಲ್ಲಾಪುರ, ಕಲಘಟಗಿ, ಮುಂಡಗೋಡ ಹಾಗೂ ಶಿರಸಿ ತಾಲ್ಲೂಕು ಪ್ರದೇಶಗಳು ಆನೆ, ಕಾಡೆಮ್ಮೆ, ಹಂದಿ, ಮಂಗ ಇತ್ಯಾದಿ ವನ್ಯಪ್ರಾಣಿಗಳ  ಹಾವಳಿಯಿಂದ ಕಂಗೆಟ್ಟಿವೆ.  ರೈಲು ಮಾರ್ಗವು ಈ ಪ್ರದೇಶದ ಕಾಡನ್ನು ಇನ್ನಷ್ಟು ಛಿದ್ರಗೊಳಿಸುವದರಿಂದ, ಭವಿಷ್ಯದಲ್ಲಿ ರೈತರ ಹೊಲ-ತೋಟಗಳಿಗೆ ವನ್ಯಪ್ರಾಣಿಗಳು ನುಗ್ಗುವದು ಇನ್ನಷ್ಟು ಹೆಚ್ಚಾಗಲಿದೆಯೆಂದು ಭಾರತೀಯ ವಿಜ್ಞಾನ ಮಂದಿರದ ತಜ್ಞರು ಎಚ್ಚರಿಸಿದ್ದಾರೆ. ಆದ್ದರಿಂದ, ಇದು ಜಿಲ್ಲೆಯ ರೈತರು ಹಾಗೂ ವನವಾಸಿ ಸಮುದಾಯಗಳ ಬದುಕಿಗೆ ಮಾರಕವಾಗಬಹುದು.

300x250 AD

          ಮೂರನೇಯದು, ಅಂಕೋಲಾ ಭಾಗದಲ್ಲಿ ಉಧ್ಭವಿಸಬಹುದಾದ ಸಮಸ್ಯೆಗಳು. ಮಳೆಗಾಲದ ಭಾರಿಮಳೆ, ಭೂಕುಸಿತಗಳು, ಈಗಾಗಲೇ ಗಂಗಾವಳಿಯಲ್ಲಿ ನೆರೆ ಉಂಟುಮಾಡುತ್ತಿದೆ. ಇನ್ನು, ಈ ಕಣಿವೆಯಲ್ಲಿ ಅರಣ್ಯ ಕಡಿದು ಲಂಬಕೋನದಲ್ಲಿ ಗುಡ್ಡ ಕಡಿಯುವ ಭಾರಿ ಕಾಮಗಾರಿಗಳನ್ನು ಕೈಗೊಂಡಿದ್ದಾದರೆ, ಬೇಸಿಗೆಯಲ್ಲಿ ಪ್ರವಹಿಸುವ ನೈಸರ್ಗಿಕ ಝರಿಗಳೆಲ್ಲ ಬಸಿದು ಒಣಗಿಹೋಗಲಿವೆ. ಆಗ, ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ಜಲಾನಯನ ತಜ್ಞರ ವರದಿಗಳು ಹೇಳುತ್ತಿವೆ. ಅಂದರೆ, ಅಂಕೋಲಾ ಭಾಗದ ಗಂಗಾವಳಿ ನದಿಯ ಇಕ್ಕೆಲಗಳಲ್ಲಿ   ಮಳೆಗಾಲದಲ್ಲಿ ಭೀಕರ ನೆರೆ ಹಾಗೂ ಬೇಸಿಗೆಯಲ್ಲಿ ನೀರಿನ ತೀವ್ರಕೊರತೆ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿ, ಈ ಪ್ರದೇಶದ ರೈತರು ಹಾಗೂ ಮೀನುಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.  

          ಈ ಮೂರೂ ಅಂಶಗಳು ಯಲ್ಲಾಪುರ  ಹಾಗೂ ಅಂಕೋಲಾ ಭಾಗದ ರೈತರು, ವನವಾಸಿಗಳು ಹಾಗೂ ಜನಸಮಾನ್ಯರ ಜೀವನಭದ್ರತೆಗೆ ಮಾರಕವಾಗಬಲ್ಲ ಸಂಗತಿಗಳು. ಆದ್ದರಿಂದ, ರೈಲುಮಾರ್ಗದ ಕುರಿತು ನಿರ್ಣಯ ಕೈಗೊಳ್ಳುವಾಗ ಇವನ್ನು ವಸ್ತುನಿಷ್ಟವಾಗಿ ಪರಿಶೀಲಿಸಲೇಬೇಕಾಗಿದೆ.  

          ಉಳಿದಂತೆ, ಜಿಲ್ಲೆಯು ಅಭಿವೃದ್ಧಿಯಾಗಲು ಹೆಚ್ಚಿನ ಉದ್ಯೋಗಾವಕಾಶಗಳು ಹಾಗೂ ಆರ್ಥಿಕ ಚಟುವಟಿಕೆಗಳು ಸೃಷ್ಟಿಯಾಗಬೇಕು ಎಂಬ ಮಾತು ಖಂಡಿತಾ ನ್ಯಾಯಸಮ್ಮತವಾದದ್ದು. ಈ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ನಾನದ ಉದ್ಯಮಗಳು, ಅರಣ್ಯಉತ್ಪನ್ನ ಮೌಲ್ಯವರ್ಧನೆ ಗೃಹೋದ್ಯಮ ಕ್ಲಸ್ಟರ್, ಸಾಂಭಾರುಬೆಳೆ ಪಾರ್ಕ್, ಕೃಷಿ ಉತ್ಪನ್ನ ಮೌಲ್ಯವರ್ಧನೆ ಕೇಂದ್ರ, ಕೃಷಿ ರಫ್ತು ವಲಯ, ರಾಷ್ಟ್ರೀಯ ಉದ್ಯಮ ಕೌಶಲ ತರಬೇತಿ ಕೇಂದ್ರ, ಒಳನಾಡು ಹಾಗೂ ಸಮುದ್ರ ಮೀನುಗಾರಿಕಾ ಸಬಲೀಕರಣ ಇತ್ಯಾದಿ ಅತೀ ಅಗತ್ಯದ ಯೋಜನೆಗಳನ್ನು ಹಮ್ಮಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಹಕ್ಕೊತ್ತಾಯ ಮಾಡಬೇಕಿದೆ. ಈ ಕುರಿತಂತೆಲ್ಲ ವ್ಯಾಪಕ ಸಮಾಲೋಚನೆಯಾಗಿ, ಅವು ಜಾರಿಯಾಗಲು  ಎಲ್ಲರೂ ಜೊತೆಯಾಗಿ ಶ್ರಮಿಸುವಂತಾಗಲು ಆಶಿಸಿದ್ದಾರೆ.  

Share This
300x250 AD
300x250 AD
300x250 AD
Back to top