Slide
Slide
Slide
previous arrow
next arrow

ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲಿ ಮಠದ ನಿಯೋಗ ಭೇಟಿ:ಪರಿಹಾರ ಮೊತ್ತದ ಶೀಘ್ರ ಬಿಡುಗಡೆಗೆ ಆಗ್ರಹ

300x250 AD

ಯಲ್ಲಾಪುರ:   ಕಳೆದ ವರ್ಷ ಭೂಕುಸಿತಕ್ಕೊಳಗಾದ ತಾಲೂಕಿನ ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲಿ ಮಠದ ನಿಯೋಗ ಭೇಟಿ ನೀಡಿತು. ಕಳಚೆಯ ಭೂಕುಸಿತ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಹೋರಾಟದ ಸಮಿತಿಯ ಸಭೆಯನ್ನು ಕಳಚೆಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆಸಲಾಯಿತು. ಗ್ರಾಮಸ್ಥರಿಗೆ ವ್ಯವಸ್ಥಿತವಾದ ಪುನರ್ವಸತಿ ಕಲ್ಪಿಸಿ ಸ್ಥಳಾಂತರಿಸಲು ಒಮ್ಮತದ ಅಭಿಪ್ರಾಯ  ಸಭೆಯಲ್ಲಿ ವ್ಯಕ್ತವಾಯಿತು.

   ಕಳೆದ ವರ್ಷದ ಭೂಕುಸಿತದಿಂದ ಸಂಪೂರ್ಣ ಹಾಗೂ ಭಾಗಶಃ ಮನೆ ಕಳೆದುಕೊಂಡವರಿಗೆ ಸರ್ಕಾರ ಘೋಷಿಸಿದ ಪರಿಹಾರ ಶೀಘ್ರ ಬಿಡುಗಡೆ ಆಗಬೇಕು. ಈವರೆಗೆ ಸಂತ್ರಸ್ಥರಿಗೆ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕಾಗಿ ಕೇವಲ 95,000 ರೂ ಬಿಡುಗಡೆ ಆಗಿದೆ. ಯಾವುದೇ ಸಮಯದಲ್ಲಿ ಭೂಕುಸಿತ ಉಂಟಾಗುವ ಭೀತಿ ಇರುವ ಹಿನ್ನೆಲೆಯಲ್ಲಿ ಎಲ್ಲಿ ಮನೆ ನಿರ್ಮಾಣ ಮಾಡಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ. ಉಳಿದ ಮೊತ್ತ ಶೀಘ್ರ ಬಿಡುಗಡೆ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. 

ಸ್ವತಃ ಮುಖ್ಯಮಂತ್ರಿಗಳು ಪ್ರಾಕೃತಿಕ ವಿಕೋಪದ ಗಂಭೀರತೆಯನ್ನು ಅವಲೋಕಿಸಿದ್ದಾರೆ. ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಈವರೆಗೆ ಕಳಚೆ ಭಾಗಕ್ಕೆ ಈವರೆಗೆ ಬಂದಿರುವ ಪರಿಹಾರದ ಮೊತ್ತ ಕೇವಲ 2 ಕೋಟಿ ರೂ ಮಾತ್ರ. ಭೂಕುಸಿತದಲ್ಲಿ ನಷ್ಟವಾದ 12 ಕಾಲುಸಂಕಗಳು, 13 ಬಾಂದಾರ್ ಗಳ ಪುನರ್ನಿರ್ಮಾಣ ಆಗಿಲ್ಲ. ಭೂಕುಸಿತದಿಂದ ತೊಂದರೆಗೆ ಒಳಗಾದರೂ ಪ್ರಸ್ತುತ ಅನಿವಾರ್ಯವಾಗಿ ಅದೇ ಸ್ಥಳದಲ್ಲಿ ಮುಂದುವರಿಯುತ್ತಿರುವವರಿಗೆ ಕುಡಿಯುವ ನೀರು, ಕಾಲುಸಂಕ, ಬಾಂದಾರ್, ರಸ್ತೆ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಗ್ರಾಮಸ್ಥರಾದ ಆರ್. ಪಿ. ಹೆಗಡೆ, ಗಜಾನನ ಭಟ್ಟ, ವೆಂಕಟ್ರಮಣ ಬೆಳ್ಳಿ, ಗೋಪಾಲ ಭಟ್ಟ, ಉಮೇಶ ಭಾಗ್ವತ ಇತರರು ಆಗ್ರಹಿಸಿದರು.

   ಈಗಾಗಲೇ ಶೇ.80 ಗಿಂತ ಹೆಚ್ಚಿನವರು ಪರಿಹಾರ ಪಡೆದು ಬೇರೆಡೆಗೆ ಹೋಗಲು ಸಿದ್ಧರಿದ್ದಾರೆ. ಉಳಿದವರು, ಬಹುಸಂಖ್ಯಾತರ ಅಭಿಪ್ರಾಯಕ್ಕೆ ನಾವೂ ಬದ್ಧ, ಜಮೀನು, ತೋಟ, ಮನೆಗಳಿಗೆ ಸೂಕ್ತ ಪರಿಹಾರ ದೊರಕಿದರೆ ತಾವೆಲ್ಲರೂ ಈ ಗ್ರಾಮವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಿದ್ಧ ಎಂದು ಹೇಳಿದರು. 

300x250 AD

 ಸಂತ್ರಸ್ಥರು ತಮ್ಮ ಆದಾಯದ ಮೂಲವಾದ ಜಮೀನುಗಳನ್ನು ಕಳೆದುಕೊಂಡಿರುವುದರಿಂದ ಅವರು ಸಹಕಾರಿ ಸಂಘ ಹಾಗೂ ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಮನ್ನಾ ಮಾಡಡಬೇಕು. ಸ್ಥಳೀಯ ಸಹಕಾರಿ ಸಂಘದಿಂದ ಒಟ್ಟೂ 16.17 ಕೋಟಿ ರೂ ಸಾಲ ವಿತರಣೆ ಆಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ತಾಲೂಕು ಮಾರ್ಕೆಟಿಂಗ್ ಸೊಸೈಟಿ, ಪಿ.ಎಲ್.ಡಿ.ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ಸಾಲದ ವಿವರಗಳನ್ನು ಪಡೆದು ಈ ಬಗ್ಗೆ ಸರ್ಕಾರದಿಂದ ಸಾಲಮನ್ನಾ ಸೌಲಭ್ಯದ ನೆರವನ್ನು ಕೋರಲು ಸಭೆಯಲ್ಲಿ ನಿರ್ಣಯಿಸಲಾಯಿತು.

  ಮುಖ್ಯಮಂತ್ರಿಗಳು ಕಳಚೆಯ ಸಂತ್ರಸ್ಥರ ಪುನರ್ವಸತಿಯ ಬಗ್ಗೆ ಘೋಷಿಸಿದ್ದ 15 ಎಕರೆ ಭೂಮಿಯನ್ನು ಶೀಘ್ರ ಒದಗಿಸಬೇಕು ಎನ್ನುವ ಬೇಡಿಕೆ ಸಭೆಯಲ್ಲಿ ವ್ಯಕ್ತವಾಯಿತು. ಸ್ವರ್ಣವಲ್ಲೀ ನಿಯೋಗದ ಅನಂತ ಹೆಗಡೆ ಅಶೀಸರ ಮಾತನಾಡಿ, ಕಳಚೆಯವರಿಗೆ ದುರಂತ ನಡೆದು ಒಂದು ವರ್ಷವೇ ಕಳೆದರೂ ಈವರೆಗೂ ಪರಿಹಾರ ದೊರಕದೇ ಇರುವ ಕುರಿತು ಶ್ರೀಗಳು ವಿಧಾನಸಭಾಧ್ಯಕ್ಷರಿಗೆ ಕರೆ ಮಾಡಿ, ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ ಎಂದರು.  

   ಅಧ್ಯಕ್ಷತೆ ವಹಿಸಿದ್ದ  ಮಠದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಹಳ್ಳಿ, ಶ್ರೀಗಳ ಮಾರ್ಗದರ್ಶನದಲ್ಲಿ ಕಳಚೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ನಡೆವುದುದಾಗಿ ತಿಳಿಸಿದರು. ನಿಯೋಗದ ಪ್ರಮುಖ ನಾರಾಯಣ ಹೆಗಡೆ ಗಡಿಕೈ ಸಭೆಯ ನಿರ್ಣಯಗಳನ್ನು ವಾಚಿಸಿದರು. ಹೋರಾಟ ಸಮಿತಿ ಪ್ರಮುಖರಾದ ಅನಂತ ಹೆಗಡೆ, ರಾಮಚಂದ್ರ ಭಟ್ಟ, ರಾಮಚಂದ್ರ ಹೆಗಡೆ, ಗಣಪತಿ ಹೆಗಡೆ, ರಾಘವೇಂದ್ರ ಭಟ್ಟ, ಕಾಶೀನಾಥ ಕಳಸ, ವಿಶ್ವೇಶ್ವರ ಭಟ್ಟ, ಜನಾರ್ದನ ಹೆಬ್ಬಾರ್ ಇತರರಿದ್ದರು.

Share This
300x250 AD
300x250 AD
300x250 AD
Back to top