ಮೈಸೂರು: ಜುಲೈ 13ರಂದು ಮೈಸೂರಿನ ರೋಟರಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಲೇಖಕಿ ಎನ್.ಆರ್. ರೂಪಶ್ರೀ ಅವರಿಗೆ “ಸಾಹಿತ್ಯ ಸುಗಂಧ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ರೂಪಶ್ರೀಯವರು ಈಗಾಗಲೇ ಎಂಟು ಪುಸ್ತಕಗಳನ್ನು ಪ್ರಕಟಿಸಿದ್ದು ,ಅವರ ಸಾಹಿತ್ಯ ಸಾಧನೆಗಾಗಿ ಈ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿನಿಧಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಪರಿಷತ್ತಿನ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ, ವಿಶ್ವ ಹವ್ಯಕ ಸಮ್ಮೇಳನದಲ್ಲಿ ಶಿಕ್ಷಕ ರತ್ನ ಪ್ರಶಸ್ತಿ, ಹೊಯ್ಸಳ ಸಂಘದಿಂದ ದಸರಾ ಕವಿ ಪ್ರಶಸ್ತಿ, ಮೊದಲಾದ ಪುರಸ್ಕಾರಗಳಿಗೆ ರೂಪಶ್ರೀ ಅವರು ಭಾಜನರಾಗಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಬಿ. ಸಂತೋಷ್ ವಹಿಸಲಿದ್ದಾರೆ. ಖ್ಯಾತ ಗಜಲ್ ಕವಿ ಮಲ್ಲಿನಾಥ ತಳವಾರ ಮುಖ್ಯ ಭಾಷಣ ಮಾಡಲಿದ್ದಾರೆ. ರೂಪಶ್ರೀ ಅವರು ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಚಂದ್ರ ಭಟ್ಟರ ಧರ್ಮಪತ್ನಿಯಾಗಿದ್ದಾರೆ. ಶಿರಸಿಯ ಕೆಡಸಿಸಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಆರ್.ಎಸ್. ಭಟ್ ಮತ್ತು ಅನಸೂಯ ದಂಪತಿಗಳ ಮಗಳು.