ಭಾರಿ ಮಳೆ-ಗಾಳಿ ಜನಜೀವನ ಅಸ್ತವ್ಯಸ್ತ
ಅಂಕೋಲಾ: ಗ್ರಾಮೀಣ ಪ್ರದೇಶಗಳಾದ ಸುಂಕಸಾಳ, ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ಗುಳ್ಳಾಪುರದಲ್ಲಿ ಗ್ರಾಮಸ್ಥರು ಕಳೆದ 4 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಿಡುವಿಲ್ಲದೇ ಭಾರೀ ಗಾಳಿಯ ಜೊತೆ ಮಳೆ ನಿರಂತರ ಸುರಿಯುತ್ತಿದೆ. ಈ ನಡುವೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕಾಗಿ ಹೆಸ್ಕಾಂ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ. ವಿದ್ಯುತ್ ಇಲ್ಲದೇ ಕುಡಿಯುವ ನೀರಿಗೂ ತೊಂದರೆ ಉಂಟಾಗುತ್ತಿದೆ. ಬಹುತೇಕರ ಇನ್ವರ್ಟರ್ ಮುಂತಾದ ಪರ್ಯಾಯ ವ್ಯವಸ್ಥೆಗಳು ನಿಷ್ಕ್ರಿಯಗೊಳ್ಳುತ್ತಿದೆ. ಒಂದೆಡೆ ನೆಟ್ವರ್ಕ್ ಸಮಸ್ಯೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಶಾಲಾ ಮಕ್ಕಳಿಗೂ ತೊಂದರೆ!
ವಿದ್ಯುತ್ ಇಲ್ಲದೇ ಶಾಲೆಗೆ ಹೋಗುವ ಮಕ್ಕಳ ವಿದ್ಯಾಭ್ಯಾಸಕ್ಕೂ ಹಿನ್ನಡೆ ಉಂಟಾಗುತ್ತಿದ್ದು. ಹೋಂ ವರ್ಕ್ ಮಾಡಲಾಗದೇ, ಓದಲಾಗದೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.
ಸಿಬ್ಬಂದಿಗಳ ಕೊರತೆ!
ಹೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಒಂದೆಡೆಯಾದರೆ ಜೊತೆಗೆ ಹೊನ್ನಳ್ಳಿ, ಗುಳ್ಳಾಪುರ ಗ್ರಿಡ್ ನಲ್ಲಿ ಪದೇ ಪದೇ ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಉಂಟಾಗುತ್ತಿದೆ.
ವಿದ್ಯುತ್ ಇಲ್ಲದೇ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. 4 ದಿನಗಳಿಂದ ಕುಡಿಯಲು ನೀರಿಲ್ಲ. ಮೊಬೈಲ್ ಗೆ ನೆಟ್ವರ್ಕ್ ಇಲ್ಲ. ನಮ್ಮ ಸಮಸ್ಯೆ ಹೇಳತೀರದಾಗಿದೆ.– ನಜೀರ್ ಶೇಖ್
(ಗ್ರಾಮಸ್ಥ)