ದಾಂಡೇಲಿ : ಅಸಮರ್ಪಕವಾಗಿ ಹಾಗೂ ನಿರ್ಲಕ್ಷದಿಂದ ಕಟ್ಟಿಗೆಯನ್ನು ಹೇರಿಕೊಂಡು ಜೀವ ಬಲಿ ಪಡೆಯುವ ರೀತಿಯಲ್ಲಿ ಟ್ರಕ್ಕೊಂದು ಸಂಚರಿಸಿದ ಘಟನೆ ಶನಿವಾರ ಮಧ್ಯಾಹ್ನ ನಗರದ ಅಂಬೇವಾಡಿ ಮುಖ್ಯ ರಸ್ತೆಯಲ್ಲಿ ಕಂಡುಬಂದಿದೆ.
ಅತಿ ಹೆಚ್ಚು ವಾಹನಗಳು ಸಂಚರಿಸುವ ರಾಜ್ಯ ಹೆದ್ದಾರಿಯಾಗಿರುವ ಅಂಬೇವಾಡಿ ರಸ್ತೆಯಲ್ಲಿ ಟ್ರಕ್ಕೊಂದು ಕಟ್ಟಿಗೆಗಳನ್ನು ಸರಿಯಾಗಿ ಕಟ್ಟದೇ ತುಂಬಿಕೊಂಡು ಸಂಚರಿಸುತ್ತಿತ್ತು. ಯಾವುದೇ ಕ್ಷಣದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳು ಇಲ್ಲವೇ ಸಂಚರಿಸುವ ವಾಹನಗಳ ಮೇಲೆ ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಸ್ಪಷ್ಟವಾಗಿ ಕಂಡುಬಂದಿತ್ತು. ತಕ್ಷಣವೇ ಸ್ಥಳೀಯರು ಟ್ರಕ್ ಚಾಲಕನಿಗೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಸೂಚನೆಯನ್ನು ನೀಡಿದರು. ಕೂಡಲೇ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಪರಿಣಾಮವಾಗಿ ಆಗಬಹುದಾದ ಅಪಾಯವೊಂದು ತಪ್ಪಿದಂತಾಗಿದೆ.