e – ಉತ್ತರ ಕನ್ನಡ ವರದಿ
ಸಹಕಾರಿ ಸಂಘಗಳಿಗೆ ಮಾರ್ಗದರ್ಶನ, ಅಭಿವೃದ್ದಿಯಲ್ಲಿ ಕೆಡಿಸಿಸಿ ಮಾತ್ರ ಹಿರಿದು
ಸೊಸೈಟಿಗಳ ಆರ್ಥಿಕ ರೀತಿ – ನೀತಿ, ವ್ಯವಹಾರ ಸುಧಾರಿಸುವಲ್ಲಿ ಕೆಡಿಸಿಸಿಯೇ ನಿರ್ಣಾಯಕ
ಶಿರಸಿ: ಉತ್ತರ ಕನ್ನಡದ ಜಿಲ್ಲೆಯ ರೈತರ ಬಹುದೊಡ್ಡ ಆರ್ಥಿಕ ಶಕ್ತಿಯೆಂದರೆ ಸ್ಥಳೀಯ ಸಹಕಾರ ಸಂಘಗಳು. ಮನೆ ಬಾಗಿಲಿಗೆ ಸಕಲ ಸೌಲಭ್ಯವನ್ನೂ ನೀಡುವ ಸಹಕಾರಿ ಸಂಸ್ಥೆಗಳ ಮೇಲೆ ಜನರಿಗೆ ವಿಶ್ವಾಸ, ನಮ್ಮದೆನ್ನುವ ಆಪ್ತಭಾವ. ಹಾಗಾಗಿಯೇ ಸಣ್ಣ ಹಳ್ಳಿಗಳಲ್ಲಿಯೂ ವ್ಯವಸ್ಥಿತವಾಗಿ ಸಹಕಾತಿ ಸಂಘಗಳು ತಲೆಎತ್ತಿ ನಿಂತಿದೆ. ತನ್ನ ನಂಬಿದ ಸದಸ್ಯ ಜನತೆಗೆ ವಿಶ್ವಾಸನೀಯ ಸೇವೆ ನೀಡಿರುವ ಹಿರಿಮೆ ಸಹಕಾರಿ ಸಂಸ್ಥೆಗಳಿಗೆ ಸಲ್ಲಬೇಕು. ಜೊತೆಗೆ ಸ್ಥಳೀಯ ಸಹಕಾರಿ ಸಂಸ್ಥೆಗಳ ಬೆಳವಣಿಗೆ, ಅಭಿವೃದ್ಧಿಯಲ್ಲಿ ಅದಕ್ಕೊಂದು ಪಾಲಕ ಶಕ್ತಿಯಾಗಿ ಜೊತೆ ನಿಂತಿದ್ದು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಎಂಬುದನ್ನೂ ಸಹ ಮರೆಯಬಾರದು. ಕಾಲಕಾಲಕ್ಕೆ ಅವಶ್ಯಕವಿರುವ ಹಣಕಾಸಿನ ನೆರವಿನ ಜೊತೆಗೆ, ಸಲಹೆ, ಮಾರ್ಗದರ್ಶನ ಮಾಡಿ, ತನ್ನೆಲ್ಲಾ ಪೂರ್ಣ ಸಹಕಾರ ನೀಡಿರುವ ಕೀರ್ತಿ ಕೆಡಿಸಿಸಿ ಬ್ಯಾಂಕ್ ನದ್ದು.
ಭಾರತವು ಗ್ರಾಮೀಣ ಪ್ರದೇಶದಿಂದ ಕೂಡಿದ ದೇಶ ಮತ್ತು ಇಲ್ಲಿ ಕೃಷಿಯು ಬಹುಮುಖ್ಯ ಕಸುಬು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಗ್ರಾಮೀಣ ಜನತೆಯ ಜೀವನಾಡಿ ಆಗಿರುವ ವ್ಯವಸಾಯ, ಕೈಗಾರಿಕೆ, ವ್ಯಾಪಾರ ಹಾಗೂ ವಹಿವಾಟುಗಳಿಗಿಂತ ಮೊದಲ ಸ್ಥಾನ ಪಡೆದಿದೆ. ಕೃಷಿಯ ಅಗತ್ಯತೆಗಳಾದ ಬೀಜ, ಗೊಬ್ಬರ ಹಾಗೂ ಇತರ ಪೂರಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿ ಉತ್ತಮ ಇಳುವರಿ ಪಡೆಯಲು ರೈತರಿಗೆ ಮತ್ತು ವ್ಯಾಪಾರ-ವಹಿವಾಟುಗಳಿಗೆ ಸಂಪನ್ಮೂಲ ಒಂದುಗೂಡಿಸಲು ವ್ಯಾಪಾರಸ್ಥರಿಗೆ ಬಂಡವಾಳದ ಕೊರತೆ ಉಂಟಾಗುವುದು ಸಾಮಾನ್ಯವಾಗಿದೆ. ಜನ ಸಾಮಾನ್ಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಗದಿತ ಅವಧಿಯಲ್ಲಿ ಸಾಲ ಪಡೆಯಲು ಹರಸಾಹಸ ಪಡುವಂತಹ ಪರಿಸ್ಥಿತಿ ಎದುರಾದಾಗ, ಸಹಕಾರ ಸಂಘಗಳು ಮಧ್ಯಮ ವರ್ಗದ ಜನರ, ಬಡಜನರ, ಸಣ್ಣ-ಸಣ್ಣ ಉದ್ದಿಮೆದಾರರ, ಕೂಲಿ ಕಾರ್ಮಿಕರ, ಹಿಂದುಳಿದ ಜನರ ಅಗತ್ಯ ಹಣಕಾಸಿನ ನೆರವಿಗೆ ಬೆನ್ನೆಲುಬಾಗಿ ನಿಂತವು. ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸೌಲಭ್ಯ, ಸದಸ್ಯರ ವೈಯಕ್ತಿಕ ಅಗತ್ಯತೆಗಳಿಗನುಗುಣವಾಗಿ ವಿವಿಧ ಉದ್ದೇಶಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ, ಕೃಷಿ-ಮಾಧ್ಯಮಿಕ ಸಾಲ, ಬಡ್ಡಿ ರಿಯಾಯಿತಿ ಸೌಲಭ್ಯದಂತಹ ಉತ್ತಮ ಯೋಜನೆಗಳ ಮೂಲಕ ಕೃಷಿಕರ, ಕಾರ್ಮಿಕರ, ವ್ಯಾಪಾರಸ್ಥರ ಸ್ನೇಹಿಯಾಗಿ ಸಹಕಾರ ಸಂಘಗಳು ಕಾಯನಿರ್ವಹಿಸುತ್ತಾ ತಮ್ಮದೇ ಭಾಪು ಮೂಡಿಸುವಲ್ಲಿ ಯಶಸ್ವಿಯಾದವು. ಇಂದಿಗೂ ಸಹ ವಿವಿಧ ರಂಗಗಳಲ್ಲಿ ಅನೇಕ ರೀತಿಯ ಸಹಕಾರ ಸಂಘಗಳು ಜನರಿಗೆ ಯೋಗ್ಯ ರೀತಿಯಲ್ಲಿ ಸೇವೆ ನೀಡುತ್ತಲಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ವಿಧದ ಸಹಕಾರ ಸಂಘಗಳಿವೆ. ಇವು ತಮ್ಮದೇ ಆದ ವ್ಯಾಪ್ತಿಯಲ್ಲಿ ಹತ್ತು ಹಲವಾರು ಉದ್ದೇಶಗಳಿಗೆ ತನ್ನ ಸದಸ್ಯರುಗಳಿಗೆ ಸೇವೆ ನೀಡುತ್ತಾ ಬಂದಿವೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು :
ಈ ಸಂಘಗಳು ತನ್ನ ಕಾರ್ಯ ಕ್ಷೇತ್ರದಲ್ಲಿನ ಪ್ರತಿ ಕುಟುಂಬವನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಂಡು, ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ, ಮಾಧ್ಯಮಿಕ ಸಾಲ ಹಾಗೂ ಕೃಷಿಯೇತರ ಸಾಲಗಳನ್ನು ವಿತರಿಸುವುದಲ್ಲದೇ ಸ್ಥಳೀಯವಾಗಿ ಠೇವಣಿ ಸಂಗ್ರಹಣೆಯನ್ನು ಮಾಡುತ್ತಲಿವೆ. ಗ್ರಾಮೀಣ ಮಟ್ಟದಲ್ಲಿನ ಜನರ ಅವಶ್ಯಕತೆಗಳನ್ನು ಪೂರೈಸಲು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ಬಹಳ ಉಪಯುಕ್ತವಾಗಿವೆ.
- ನೌಕರರ ಪತ್ತಿನ ಸಹಕಾರಿ ಸಂಘಗಳು :
ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ನೌಕರರು ತಮ್ಮೊಳಗೆ ಒಟ್ಟಾಗಿ ರಚಿಸಿಕೊಂಡ ಸಂಘಗಳು, ತಮ್ಮ ಸಂಘದ ಸದಸ್ಯರಿಗೆ ವೈಯಕ್ತಿಕ ಉದ್ದೇಶಗಳಿಗೆ ವಿವಿಧ ರೀತಿಯ ಸಾಲ ವಿತರಿಸುವ ಕೆಲಸ ಮಾಡುತ್ತವೆ.
- ಔದ್ಯೋಗಿಕ ಸಹಕಾರಿ ಸಂಘಗಳು :
ಇವು ವ್ಯಾಪಾರ ವಹಿವಾಟುಗಳಿಗೆ ಅವಶ್ಯವಿರುವ ಕಚ್ಚಾವಸ್ತುಗಳಿಗೆ ಬಂಡವಾಳ ವಿನಿಯೋಗಿಸಲು ವ್ಯಾಪಾರಸ್ಥ ಸದಸ್ಯರಿಗೆ ಕೃಷಿಯೇತರ ಸಾಲ ನೀಡುತ್ತವೆ.
- ಪಟ್ಟಣ ಸಹಕಾರ ಬ್ಯಾಂಕುಗಳು :
ಇವು ಕೃಷಿಯೇತರ ಸಾಲ / ಹಣಕಾಸು ನೆರವು ನೀಡುವಸಂಸ್ಥೆಗಳು. ಸಣ್ಣ ವ್ಯಾಪಾರ / ಉದ್ಯಮ / ಸಣ್ಣ ಕೈಗಾರಿಕೆ, ಸಂಘ ಸಂಸ್ಥೆಗಳ ಉದ್ಯೋಗಿಗಳಿಗೆ. ವೃತ್ತಿ ನಿರತರು ಹಾಗೂ ಅಲ್ಪ ಸಂಪನ್ಮೂಲಗಳುಳ್ಳ ವ್ಯಕ್ತಿಗಳಿಗೆ ಹಣಕಾಸಿನ ನೆರವು ನೀಡುತ್ತವೆ. ವೈಯಕ್ತಿಕ ಭದ್ರತೆ, ಆಸ್ತಿ ಭದ್ರತೆ, ಚಿನ್ನಾಭರಣ ಒತ್ತೆ ಪಡೆದು ಸಾಲ ನೀಡುತ್ತದೆ. ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟವು ದೆಹಲಿಯಲ್ಲಿದೆ. ಈ ಒಕ್ಕೂಟವು ಬ್ಯಾಂಕುಗಳ ನಾಯಕತ್ವ ವಹಿಸಿ ಅವುಗಳಿಗೆ ಸಲಹೆ, ಮಾರ್ಗದರ್ಶನ ಹಾಗೂ ಬೆಂಬಲ ನೀಡುತ್ತದೆ.