ಹೊಸ ಕಾನೂನಿಗಲ್ಲ, ಜಾರಿಯಲ್ಲಿ ಇರುವ ಕಾನೂನು ಅನುಷ್ಠಾನಕ್ಕೆ ಹೋರಾಟ: ರವೀಂದ್ರ ನಾಯ್ಕ
ಅಂಕೋಲಾ: ಅರಣ್ಯ ಭೂಮಿ ಹಕ್ಕಿಗಾಗಿ ರಾಜ್ಯಾದಂತ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾ ಜರುಗುತ್ತಿರುವುದು ಹೊಸ ಕಾನೂನಿಗಾಗಲಿ, ತಿದ್ದುಪಡಿಗಾಗಿ ಅಲ್ಲ. ಪ್ರಸ್ತುತ ಜಾರಿಯಲ್ಲಿರುವ ಕಾನೂನು, ಅನುಷ್ಠಾನಕ್ಕಾಗಿ ಹೋರಾಟ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಏ. ೮ ರಂದು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಅಂಕೋಲಾದ ಸ್ವತಂತ್ರ ಭವನದ ಪದ್ಮಶ್ರೀ ಸುಕ್ರಿ ಗೌಡ ಮತ್ತು ಪದ್ಮಶ್ರೀ ತುಳಸಿ ಗೌಡ ವೇದಿಕೆಯಲ್ಲಿ ಬೃಹತ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾವನ್ನುದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಕಾನೂನು ಜಾರಿಗೆ ಬಂದು ೧೮ ವರ್ಷಗಳಾಗಿದ್ದರು, ಕಾನೂನಿಗೆ ವ್ಯತಿರಿಕ್ತವಾಗಿ ಮತ್ತು ಕಾನೂನಿನ ವಿಧಿವಿಧಾನ ಅನುಸರಿಸದೇ ಅರಣ್ಯವಾಸಿಗಳ ತಿರಸ್ಕಾರವಾಗಿದೆ. ೩ ತಲೆಮಾರಿನ ವಯಕ್ತಿಕ ದಾಖಲೆಗಳ ಅವಶ್ಯಕತೆ ಪರಿಗಣಿಸುವದರಿಂದ ತಿರಸ್ಕಾರಕ್ಕೆ ಕಾರಣವಾಗಿದೆ. ಈಗಾಗಲೇ ಅನುಷ್ಠಾನ ಇರುವ ಕಾನೂನಡಿಯಲ್ಲಿಯೇ ರಾಜ್ಯಾದಂತ ೨೩೦೦ ಕ್ಕೂ ಮಿಕ್ಕಿ ಪಾರಂಪರಿಕ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕು ವಿತರಿಸಲಾಗಿದೆ. ಈ ಹಿಂದೆ ನೀಡಿದ ಸಾಗುವಳಿ ಹಕ್ಕಿಗೆ ಅನುಸರಿಸದ ಮಾನದಂಡವನ್ನೇ ಇನ್ನುಳಿದ ಪಾರಂಪರಿಕ ಅರಣ್ಯವಾಸಿಗಳಿಗೂ ನೀತಿನಿಯಮ ಅನುಸರಿಸಲು ಅವರು ಆಗ್ರಹಿಸಿದರು.
ತಾಲೂಕಾ ಅಧ್ಯಕ್ಷ ರಮಾನಂದ ನಾಯ್ಕ ಅಚವೆ ಅಧ್ಯಕ್ಷತೆಯನ್ನು ವಹಿಸಿದರು. ಹೋರಾಟವನ್ನ ಬಲಗೊಳಿಸುವಂತೆ ಕರೆ ನೀಡಿದರು. ಹಿರಿಯ ಚಿಂತಕ ಪಾಂಡುರಂಗ ಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಪ್ರಾಸ್ತಾವಿಕವಾಗಿ ಬಾಲಚಂದ್ರ ಶೆಟ್ಟಿ ಮಾತನಾಡಿದ್ದರು. ನಿರ್ವಹಣೆ ವಿನಾಯಕ ಮರಾಠಿ ದೊಡ್ಮನೆ ಮತ್ತು ವಿನಾಯಕ ಮರಾಠಿ ಕೊಡಿಗದ್ದೆ ನಿರ್ವಹಿಸಿದರು. ಶಂಕರ ಕೊಡಿಯಾ, ನಾಗರಾಜ ನಾಯ್ಕ, ಗೌರೀಶ ಗೌಡ, ಮುಂತಾದವರು ಮಾತನಾಡಿದರು. ಕೊನೆಯಲ್ಲಿ ರಾಜೇಶ ಮಿತ್ರ ವಂದಿಸಿದರು.
ಬೃಹತ್ ಜಾಥಾ:
ಸ್ವತಂತ್ರ ಭವನದಲ್ಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮೂಲಕ ಬೃಹತ್ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸ್ವತಂತ್ರ ಭವನದಲ್ಲಿ ಸಭೆಯನ್ನಾಗಿ ಮಾರ್ಪಟಿತು. ಜಾಥಾ ನೇತೃತ್ವವನ್ನು ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ, ಸಂಚಾಲಕರಾದ ವಿಜು ಪಿಲ್ಲೆ, ಅರವಿಂದ ಗೌಡ, ವಿನೋದ ನಾಯ್ಕ ಹಟ್ಟಿಕೇರಿ, ಶಂಕರ ನಾಯ್ಕ, ಹೊಸಗದ್ದೆ, ವೆಂಕಟರಮಣ ನಾಯ್ಕ ಮಂಜುಗುಣಿ ಉಪಸ್ಥಿತರಿದ್ದರು.
೧೯೩೦ರ ದಾಖಲೆ-ರವೀಂದ್ರ ನಾಯ್ಕ ವಾದ:
ಉಪ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿ ನಿರ್ದಿಷ್ಟ ವಯಕ್ತಿಕ ದಾಖಲೆಗೆ ಒತ್ತಾಯಿಸತ್ತಕ್ಕದ್ದಲ್ಲ ಅಂತ ೨೦೧೨ ಸೆಪ್ಟೆಂಬರನಲ್ಲಿ ಕಾನೂನು ತಿದ್ದುಪಡಿಯಾಗಿದೆ. ಅಪಾರ್ಥವಾಗಿ ಅರ್ಥಾಯಿಸಿ ಮೂರು ತಲೆಮಾರಿನ ವಯಕ್ತಿಕ ದಾಖಲೆ ಆಗ್ರಹಿಸುವದು ತಪ್ಪು. ಅರಣ್ಯವಾಸಿ ಸಾಗುವಳಿ ಕ್ಷೇತ್ರದ ಪ್ರದೇಶ ಮೂರು ತಲೆಮಾರಿನಿಂದ ಜನವಸತಿ ಇರುವ ಸಾಂದರ್ಭಿಕ ದಾಖಲೆ ನೀಡಿದರೆ ಸಾಕು ಎಂದು ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯ ಆದೇಶ ನೀಡಿದೆ. ಅಲ್ಲದೇ, ಗುಜರಾತ ಹೈ ಕೋರ್ಟ್ ಸಹಿತ ದಾಖಲೆ ಅಪೇಕ್ಷಿಸುವದು ಕಾನೂನು ಬಾಹಿರ ಅಂತ ತೀರ್ಪು ನೀಡಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.