ಶಿರಸಿ: ಕೆಂಗ್ರೆ ಜಲಸಂಗ್ರಹಾಗಾರದಿಂದ ನಗರಕ್ಕೆ ನೀರು ಸರಬರಾಜು ಮಾಡುವ ಹಳೆಯ ಪೈಪ್ ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವಿಳಂಬವಾಗುತ್ತಿದೆ. ಪೈಪ್ ಕಳ್ಳತನ ಮಾಡಿದ್ದಾನೆಂದು ದೂರು ದಾಖಲಾದ ವ್ಯಕ್ತಿಯು ನಗರಸಭೆಯ ಕೆಲ ಸದಸ್ಯರ ಹೆಸರು ಹೇಳಿದ್ದಾನೆ ಎಂಬ ವದಂತಿ ಹರಡುತ್ತಿದೆ. ಆತ ಹೇಳಿದ ಆರೋಪಿ ಸದಸ್ಯರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ನಗರ ನಗರ ಮಂಡಲಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಆನಂದ ಸಾಲೇರ ಆಗ್ರಹಿಸಿದರು.
ಅವರು ಸೋಮವಾರ ನಗರದ ದೀನದಯಾಳ ಸಭಾಭವನದಲ್ಲಿ ನಗರಸಭೆಯ 19 ಬಿಜೆಪಿ ಸದಸ್ಯರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ಸದಸ್ಯರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವದಂತಿ ಹರಡಿರುವುದರಿಂದ ಎಲ್ಲ ಸದಸ್ಯರನ್ನೂ ಜನ ಅನುಮಾನಾಸ್ಪದವಾಗಿ ನೋಡುತ್ತಿದ್ದಾರೆ. ಯಾರಾದರೂ ಸದಸ್ಯರು ಭಾಗಿಯಾಗಿದ್ದರೆ ಅವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿದರೆ ಉಳಿದ ಸದಸ್ಯರು ನಿರಾಳವಾಗಿ ತಲೆ ಎತ್ತಿ ನಿಲ್ಲಬಹುದಾಗಿದೆ. ಈಗಾಗಲೇ ತನಿಖೆ ತಿಂಗಳುಗಳ ಕಾಲ ವಿಳಂಬವಾಗಿದ್ದು, ಈ ವಿಳಂಬಕ್ಕೆ ಯಾವ ಕಾಣದ ಕೈ ಕೆಲಸ ಮಾಡಿದೆ ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು ತನಿಖೆ ಇಷ್ಟು ನಿಧಾನಗತಿಯಲ್ಲಿ ಸಾಗಿದರೆ ಹೇಗೆ ಎಂದು ಪ್ರಶ್ನಿಸಿದರು. ಒಂದೊಮ್ಮೆ ಈ ಪ್ರಕರಣದಲ್ಲಿ ಬಿಜೆಪಿಯ ನಗರಸಭಾ ಸದಸ್ಯರು ಭಾಗಿಯಾಗಿದ್ದರೆ ಯಾವುದೇ ಮುಲಾಜಿಲ್ಲದೇ ಕಟ್ಟುನಿಟ್ಟಿನನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲ ಮಾಹಿತಿಗಳ ಪ್ರಕಾರ ಬಕ್ರಿಯಾ ಮುಹಮ್ಮದ್ ಶಿಖಾರಿಪುರ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಆತ ಕೆಲ ನಗರಸಭಾ ಸದಸ್ಯರ ಹೆಸರು ಹೇಳಿದ್ದಾನೆ ಎಂದೂ ಹೇಳಲಾಗುತ್ತಿದೆ. ಇದರಿಂದ ನಮಗೆ ಸಹಿಸಲಾಗದ ಮುಜುಗರ ಆಗುತ್ತಿದೆ. ಪೊಲೀಸರು ಹೆಸರು ಬಹಿರಂಗಪಡಿಸಲಿ. ಯಾರೇ ಭಾಗಿಯಾಗಿದ್ದರೂ ಹೇಳಲಿ, ಉಳಿದ ಸದಸ್ಯರು ಆರೋಪಮುಕ್ತರಾಗಲಿದ್ದಾರೆ ಎಂದರು.
ನಗರಸಭಾ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಶಿರಸಿ ನಗರದ ಸಾರ್ವಜನಿಕರ ದುಡ್ಡು ಇದು. ನಾವು ಪ್ರಾಥಮಿಕವಾಗಿ ನಗರಸಭೆಯಿಂದ ತನಿಖೆ ನಡೆಸಿದಂತೆ 701 ಮೀಟರ್ ದೂರದ ಪೈಪ್ ಕಳ್ಳತನವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಮಾಕಾಂತ ಭಟ್, ಸದಸ್ಯರಾದ ವೀಣಾ ಶೆಟ್ಟಿ, ಪ್ರಮುಖರಾದ ನಂದನ ಸಾಗರ ಮತ್ತಿತರರು ಇದ್ದರು.