ಜೋಯಿಡಾ: ತಾಲೂಕಿನ ನಂದಿಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾದ ಜನಾರ್ಧನ ಹೆಗಡೆ 36 ವರ್ಷಗಳ ಕಾಲ ತಮ್ಮ ಶಿಕ್ಷಕ ಸೇವಾವಧಿಯಲ್ಲಿ ಸಹ ಶಿಕ್ಷಕ, ಸಿಆರ್‌ಪಿ ಮುಖ್ಯ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ ಅವರು ಏಪ್ರಿಲ್ 29 ರಂದು ಸೇವಾ ನಿವೃತ್ತಿ ಹೊಂದುತ್ತಿರುವ ಕಾರಣ ಶಾಲಾ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ, ಶಾಲಾಭಿವೃದ್ಧಿ ಸಮಿತಿ,ಊರ ಗ್ರಾಮಸ್ಥರ ಸಹಯೋಗದಲ್ಲಿ ಗುರುವಂದನಾ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಸಹ ಶಿಕ್ಷಕರಾದ ಭುವನೇಶ್ವರ ಮೇಸ್ತಾರವರು ಸಭಾ ಕಾರ್ಯಕ್ರಮದ ಗಣ್ಯರನ್ನು ವಿದ್ಯಾರ್ಥಿಗಳಿಂದ ಹೂ ಗುಚ್ಛ ನೀಡಿ ಸ್ವಾಗತಿಸಿದರೆ,ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಅರ್ಚನಾ ಹೆಗಡೆ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಶಿರಸಿಯ ಡಯಟ್ ಪ್ರಾಂಶುಪಾಲ ಎಂ.ಎಸ್. ಹೆಗಡೆ ಉದ್ಘಾಟಿಸಿ ಮಾತನಾಡಿ ಜನಾರ್ಧನ ಹೆಗಡೆ ಅಪರೂಪದ ಶಿಕ್ಷಕರು, ಎಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾದ ಇವರು ಜೋಯಿಡಾ ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಕನ್ನಡ ಭಾಷೆಗೆ ಹೆಚ್ಚಿನ ಒತ್ತನ್ನು ನೀಡಿ ಕನ್ನಡ ಬೆಳೆಸಲು ಶ್ರಮ ಪಟ್ಟವರು. ತಾಲೂಕಿನಲ್ಲಿ ಮರಾಠಿ, ಕೊಂಕಣಿ ಭಾಷೆ ಹೆಚ್ಚಿದ್ದರು. ಯುವ ಜನತೆಗೆ ಕನ್ನಡ ಕಲಿಸಿ ,ಮಕ್ಕಳಿಗೆ ಶಿಕ್ಷಣ ಬೇಕೆಬೇಕು ಎಂದು ತಾಲೂಕಿನ ಉದ್ದಗಲಕ್ಕೆ ತಿರುಗಾಡಿ ಕನ್ನಡದ ಉಳಿವಿಗಾಗಿ ಹೋರಾಡಿದ ಶಿಕ್ಷಕ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಮಿತಿಯ ವತಿಯಿಂದ ಜನಾರ್ಧನ ಹೆಗಡೆ ಅವರು ಸೇವಾ ನಿವೃತ್ತಿ ಹೊಂದುತ್ತಿರುವುದರಿಂದ ಅವರ ಸ್ಥಾನ ತುಂಬಲು ಶಿಕ್ಷಕರನ್ನು ನೀಡುವಂತೆ ಮನವಿ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಮಾತನಾಡಿ ಜನಾರ್ಧನ ಹೆಗಡೆ ಅವರು ಒಬ್ಬ ಶಿಕ್ಷಕರಷ್ಟೇ ಅಲ್ಲ. ಅವರಲ್ಲಿ ಅದ್ಭುತವಾದ ಜ್ಞಾನ ಭಂಡಾರವಿದ್ದು, ಸಮಾಜಮುಖಿಯಾಗಿ ನಮ್ಮ ತಾಲೂಕಿನ ಶಿಕ್ಷಣಕ್ಕೆ ಅವರ ಕೊಡುಗೆ ಸ್ಮರಣೀಯ ಎಂದು ಹೇಳಿದರು. ದೂರದ ಮಹಾರಾಷ್ಟ್ರದಿಂದ ಬಂದು ಈ ಹಿಂದೆ ತಾಲೂಕಿನ ಶಿಂಗರಗಾಂವ ಶಾಲೆಯಲ್ಲಿ ಜನಾರ್ಧನ ಹೆಗಡೆ ಸರ್ ಜೊತೆ ಸೇವೆ ಸಲ್ಲಿಸಿದ ವರಪೆ ಸರ್ ಮಾತನಾಡಿ ತಮಗೆ ಕನ್ನಡ ಬಾಷೆ ಕಲಿಯಲು,ತಮ್ಮ ವ್ಯಕ್ತಿತ್ವ ಬದಲಾವಣೆಗೆ ಕಾರಣಕರ್ತರಾದ ಹೆಗಡೆ ಸರ್ ಜೊತೆಗಿನ ಬಾಂಧವ್ಯವನ್ನು ಎಲ್ಲರ ಮುಂದೆ ಹಂಚಿಕೊಂಡರು. ಯರಮುಖ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಕನ್ಯಾ ದೇಸಾಯಿ ಮಾತನಾಡಿ ನಮ್ಮ ಊರಿನವರಾದ ಇವರು ಜನಾರ್ಧನ ಮಾಸ್ತರು ಎಂದೇ ಜನಪ್ರಿಯರಾದ ಇವರು ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮಾರ್ಗದರ್ಶನ ನೀಡಿದವರು ಅವರು ಇಂದು ಸೇವಾ ನಿವೃತ್ತಿ ಹೊಂದುತ್ತಿರುವುದು ಊರಿನವರಿಗೆ ಬೇಸರದ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ಜನಾರ್ಧನ ಹೆಗಡೆ ಸರ್ ರವರ 36 ವರ್ಷಗಳ ಶಿಕ್ಷಕ ಸೇವಾವಧಿಯಲ್ಲಿ,ನಾನು ಅವುರ್ಲಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅವರ ಮಾರ್ಗದರ್ಶನ, ತನು ಮನ ಧನದ ಸಹಕಾರವನ್ನು ಸ್ಮರಿಸುತ್ತಾ,ಅವರ ಸೇವಾ ನಿವೃತ್ತಿ ಜೀವನ ಸುಖಕರವಾಗಲಿ, ಮುಂದೆಯೂ ಸಹ ಅವರ ಮಾರ್ಗದರ್ಶನ, ಪ್ರೋತ್ಸಾಹ,ಸಲಹೆ, ಸೂಚನೆಗಳು ನಮ್ಮೆಲ್ಲರಿಗೂ ಇರಲಿ ಎಂದು ಹೇಳಿದರು.
ಸಿ.ಆರ್.ಪಿ ಭಾಸ್ಕರ ಗಾಂವ್ಕರ ಮಾತನಾಡಿ ಒಬ್ಬ ಶಿಕ್ಷಕ ಇದ್ದರೆ ಆತ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುತ್ತಾನೆ ಎನ್ನುವುದಕ್ಕೆ ಜನಾರ್ಧನ ಹೆಗಡೆ ಅವರೇ ಉದಾಹರಣೆ. ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳ ಜವಾಬ್ದಾರಿ ಹೊತ್ತು ಎಲ್ಲಾ ಮಕ್ಕಳು ಶಿಕ್ಷಣ ಕಲಿಯಬೇಕು ಎಂಬುದು ಇವರ ಗುರಿಯಾಗಿತ್ತು ಎಂದರು.ಅವರ ಜೊತೆಗಿನ ಸೇವೆಯಲ್ಲಿನ ಅನುಭವವನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿ ಜನಾರ್ಧನ ಹೆಗಡೆ ಅವರು ನನಗೆ ಸದಾ ನನ್ನ ಏಳ್ಗೆಯನ್ನು ಬಯಸಿದ ಗುರುಗಳು, ಅವರ ಮಾರ್ಗದರ್ಶನದಿಂದ ನನಗೆ ರಾಜಕೀಯವಾಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಕೂಲವಾಗಿದೆ, ಹಿಂದೆ ಗುರು ಮುಂದೆ ಗುರಿ ಎಂದಿಗೂ ಇರಬೇಕು ಎಂದರು. ನಂತರ ಊರ ನಾಗಕರಿಕರು ಶಾಲಾ ಸಹ ಶಿಕ್ಷಕರು ಶಿಕ್ಷಣ ಇಲಾಖೆ ಗ್ರಾಮ ಪಂಚಾಯತ, ಹಾಗೂ ಸ್ನೇಹಿತರ ಬಳಗದಿಂದ ಶಿಕ್ಷಕ ಜನಾರ್ಧನ ಹೆಗಡೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜನಾರ್ಧನ ಹೆಗಡೆ ಗುಂದ ಇದು ನನ್ನದೇ ಊರು ಇಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ,ಬೃಹ್ಮಚಾರಿಯಾದ ನಾನು ಬೀದರದಲ್ಲಿ 8 ವರ್ಷ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅಲ್ಲಿಯ ಜನರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ, ಕಷ್ಟದ ಜೀವನವಾದರು ಇಷ್ಟ ಪಟ್ಟು ಕೆಲಸ ಮಾಡಿದೆ ,ಕನ್ನಡ ಕಲಿಸಿದೆ ,ನನ್ನ ಶಾಲೆ ಅಭಿವೃದ್ಧಿಗಾಗಿ ಶ್ರಮ ಪಟ್ಟಿದ್ದೇನೆ ಮುಂದೆಯೂ ಶ್ರಮ ವಹಿಸುತ್ತೇನೆ ನನ್ನ ಶಿಷ್ಯಂದಿರು ಒಳ್ಳೆಯ ಹುದ್ದೆಗೆ ಹೋಗಲಿ, ಸಮಾಜದಲ್ಲಿ ಉತ್ತಮವಾಗಿ ಬದುಕಲಿ ಎಂದರು. ಸಾರ್ವಜನಿಕರು, ಇಲಾಖೆಯ ಅಧಿಕಾರಿಗಳು,ಹಿತೈಷಿಗಳು ಸನ್ಮಾನಿಸಿ ಆಶೀರ್ವಾದ ಪಡೆದರು.
ವಾರ್ಷಿಕ ಸ್ನೇಹ ಸಮ್ಮೇಳನದ ನಿಮಿತ್ತ ಶಾಲೆಯ ವಿವಿಧ ಕ್ರೀಡೆ, ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿಧ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಶಾಲೆಯ ಸಹ ಶಿಕ್ಷಕಿಯಾದ ಶೋಭಾ ಮೇಡಂ ಸಹಕಾರ ನೀಡಿದರು. ಜನಾರ್ಧನ ಹೆಗಡೆ ಅವರು ತಾನು ಸೇವೆ ಸಲ್ಲಿಸಿದ ಶಾಲೆಗೆ ಲ್ಯಾಪ್ ಟಾಪ್ ನ್ನು ಕಾಣಿಕೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಂದಿಗದ್ದೆ ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ, ಸದಸ್ಯರಾದ ಧವಳೋ ಸಾವರಕರ, ಶೋಭಾ,ಎಸ್.ಡಿ.ಎಂ. ಸಿ ಅಧ್ಯಕ್ಷರಾದ ಮಂಜುನಾಥ ಬಿ,ಸೋಮಣ್ಣ ಎ,ಮಹಾದೇವ ವಿ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ,ಗುಂದ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜೋಸೆಫ್ ಸರ್, ಬಿ.ಆರ್.ಪಿ ಶಶಿಕಾಂತ ಹೂಲಿ,ಶಶಿಕಾಂತ ಕಾಂಬಳೆ, ಕ.ಸಾ.ಪ ಜಿಲ್ಲಾ ಸದಸ್ಯೆ ಸೀತಾ ದಾನಗೇರಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಹನುಮಂತ ದಾನಶೂರ, ಉಪಾಧ್ಯಕ್ಷೆ ಅರ್ಚನಾ ಹೆಗಡೆ, ಸಹ ಶಿಕ್ಷಕರು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಸದಸ್ಯೆ ಸೀತಾ ದಾನಗೇರಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಹನುಮಂತ ಕೊರಗರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು. ನಂತರ ನಂದಿಗದ್ದೆ, ಯರಮುಖ, ಕರ್ಕಮನೆ, ಅವುರ್ಲಿ,ಗುಂದ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಜನಮನ ಸೆಳೆದವು.