ಶಿರಸಿ: ಸ್ಕೊಡ್ವೆಸ್ ಸಂಸ್ಥೆ ಶಿರಸಿ ಹಾಗೂ ದೇಸಾಯಿ ಫೌಂಡೆಶನ್ ಟ್ರಸ್ಟ್ ಗುಜರಾತ್ ಇವರ ಸಹಯೋಗದಲ್ಲಿ ಮಕ್ಕಳಲ್ಲಿ ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳ ಮೂಲಕ ಕೌಶಲ್ಯ ಅಭಿವೃದ್ಧಿ ಮಾಡುವ ಉದ್ದೇಶದಿಂದ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಏ.2ರಂದು ಶಿರಸಿ ತಾಲೂಕಿನ ಹುಣಸೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂತನ ಜಾನ್ಮನೆ ಶಾಲೆಯ ಸಭಾಭವನದಲ್ಲಿ ಮಕ್ಕಳಿಗೆ ಹಮ್ಮಿಕೊಂಡಿರುವ ಏಳು ದಿನಗಳ ಉಚಿತ ಬೇಸಿಗೆ ರಜಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಉಚಿತ ಬೇಸಿಗೆ ಶಿಬಿರವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರೋಜಾ ನಾರಾಯಣ ಮೊಗೇರ ಇವರು ಶಿಬಿರವನ್ನು ಉದ್ಘಾಟಿಸಿ, ಮಕ್ಕಳು ರಜಾ ಅವಧಿಯ ದುರುಪಯೋಗ ಮಾಡಿಕೊಳ್ಳದೇ, ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ವಿವಿಧ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳೊಂದಿಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ಶಿಬಿರದಲ್ಲಿ ಕಲಿತ ಉತ್ತಮ ಮೌಲ್ಯಗಳನ್ನು ನಮ್ಮ ಶೈಕ್ಷಣಿಕ ಜೀವನದಲ್ಲಿ ರೂಢಿಸಿಕೊಳ್ಳಬೇಕು, ಮಕ್ಕಳಲ್ಲಿರುವ ಕ್ರಿಯಾಶೀಲತೆಯನ್ನು ಹೊರಹಾಕಲು ಇಂತಹ ಶಿಬಿರಗಳು ಉತ್ತಮ ವೇದಿಕೆಯಾಗಿದೆ. ಸ್ಕೊಡ್ವೆಸ್ ಸಂಸ್ಥೆಯಿಂದ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದರು.
ಈ ಶಿಬಿರದಲ್ಲಿ ಪ್ರತಿನಿತ್ಯ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಯೋಗ, ಧ್ಯಾನ, ಚಿತ್ರಕಲೆ, ಕ್ರಾಪ್ಟ್, ನೃತ್ಯ, ಜಾನಪದ ಕಲೆಯಾದ ಡೊಳ್ಳು ಕುಣಿತ ಹಾಗೂ ಮನರಂಜನೀಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಸ್ಕೊಡ್ವೆಸ್ ಸಂಸ್ಥೆಯ ಯೋಜನಾ ಸಂಯೋಜಕರಾದ ಉಮೇಶ ಮರಾಠಿ ಶಿಬಿರದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಸಮುದಾಯ ಸಂಘಟಕರಾದ ದಿನೇಶ ಮಡಿವಾಳರವರು ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ತರಬೇತುದಾರರಾದ ಪ್ರಮೋದಿನಿ ಮಡಿವಾಳ ಹಾಗೂ ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು.