ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಸಮಿತಿ ಗೋಳಿ ಹಾಗೂ ಹಾರೂಗಾರ್ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಗೋಳಿ ಇವರುಗಳ ಸಹಯೋಗದಲ್ಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ 2023-24 ನೇ ಸಾಲಿನ ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ , ತೃತೀಯ ಹಾಗೂ ಏಳನೇ ರಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಪ್ರೇರಕ ಶಿಕ್ಷಕ ವೃಂದಕ್ಕೆ ಅಭಿಮಾನದ ಸನ್ಮಾನ ಸಮಾರಂಭ ನಡೆಯಿತು. ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ ಕುಮಾರಿ ಚಿನ್ಮಯಿ ಶ್ರೀಪಾದ ಹೆಗಡೆ ದೊಡ್ಮನೆ, ರಾಜ್ಯಕ್ಕೆ ಮೂರನೇ ರ‌್ಯಾಂಕ್ ಗಳಿಸಿದ ಕುಮಾರಿ ತೃಪ್ತಿ ರಾಮಚಂದ್ರ ಗೌಡ ಮಳಲಿ ಹಾಗೂ ಏಳನೇ ರ‌್ಯಾಂಕ್ ಗಳಿಸಿದ ಕುಮಾರ ಚೈತನ್ಯ ಗಣಪತಿ ಹೆಗಡೆ ಹೊಸ್ಮನೆ ಇವರುಗಳಿಗೆ ಹಾಗೂ ಸಮಸ್ತ ಶಿಕ್ಷಕ-ಶಿಕ್ಷಕೇತರ ವೃಂದವನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ್ ಹೆಗಡೆ ಅವರು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳ ಹಾಗೂ ಸಾರ್ಥಕತೆಯ ಕುರಿತು ಸಭಿಕರಿಗೆ ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ ಹೆಗಡೆಯವರನ್ನು ಸಂಘಟನೆಯ ಪರವಾಗಿ ಸನ್ಮಾನಿಸಲಾಯಿತು. ಮತ್ತೋರ್ವ ಅತಿಥಿಗಳಾದ ಸಿದ್ದಾಪುರದ ಸಾಮಾಜಿಕ ಧುರೀಣರಾದ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮಾತೃಭಾಷೆಯಲ್ಲಿ ಕಲಿತರೆ ಎಲ್ಲಾ ಭಾಷೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಂಡು ವ್ಯವಹರಿಸಬಹುದು ಎಂಬುದನ್ನು ಮನದಟ್ಟು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಜುನಾಥ ಎಲ್. ಹೆಗಡೆ ಹಲಸಿಗೆ ಇವರು ಪ್ರಸ್ತುತ ದಾಖಲಾತಿಯ ಕೊರತೆ ಹಾಗೂ ಭವಿಷ್ಯದ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿರಸಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಗದೀಶ್ ಗೌಡ್ರು, ಹಾರೂಗಾರ್ ಸೊಸೈಟಿಯ ಅಧ್ಯಕ್ಷರಾದ ಗುರುಪಾದ ಹೆಗಡೆ ಬೊಮ್ಮನಳ್ಳಿ, ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ನಾರಾಯಣ ದೈಮನೆ ಉಪಸ್ಥಿತರಿದ್ದರು. ಕುಮಾರಿ ಶ್ರೇಯ ಹೆಗಡೆ ಇವಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ಸ್ವಾಗತವನ್ನು ವಿದ್ಯಾ ಪ್ರಸಾರ ಸಮಿತಿಯ ಕೋಶಾಧ್ಯಕ್ಷರಾದ ರಮೇಶ್ ಭಟ್ಟ ಅಬ್ಬಿಹದ್ದ ನೆರವೇರಿಸಿದರು. ಪ್ರೌಢಶಾಲೆಯ ಶಿಕ್ಷಕರಾದ ರೂಪೇಶ್ ಚಹ್ವಾಣ್ ಮತ್ತು ಗಣೇಶ್ ಜಿ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.